
ಧರ್ಮಸ್ಥಳ: ತಂಡವೊಂದು ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿದ ಘಟನೆ ಎ.23ರಂದು ಪುದುವೆಟ್ಟು ಸಮೀಪ ನಡೆದಿದೆ. ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ ಬೊಲ್ಮನಾರು ಮನೆ ನಿವಾಸಿ ಹರೀಶ್ ಕುಮಾರ್ (27ವ) ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕರ್ತವ್ಯಕ್ಕೆ ರಜೆ ಇದ್ದ ಕಾರಣ ಹರೀಶ್ ಕುಮಾರ್ ಕಳೆಂಜ ಗ್ರಾಮದ ಮಾಣಿಗೇರಿ ಹೊಳೆ ಎಂಬಲ್ಲಿ ಜೀಪು ತೊಳೆಯುತ್ತಿದ್ದ ವೇಳೆ ರಾತ್ರಿ 8.30ರ ಸುಮಾರಿಗೆ ಸ್ಥಳೀಯರಾದ ಪ್ರಸನ್ನ, ಅಚ್ಚು, ಶಿವಪ್ಪ, ಉಮೇಶ್ ಗೌಡ ಎಂಬವರು ಸ್ಥಳಕ್ಕೆ ಬಂದು ತನ್ನ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಜೀಪನ್ನು ಅಲ್ಲಿಂದ ಮಾಣಿಗೇರಿ ರಸ್ತೆಯ ಸಮೀಪ ತಂದಿಟ್ಟು ಜೀಪಿನ ಟಯರ್ ಗಳ ಗಾಳಿಯನ್ನು ತೆಗೆದಿದ್ದಾರೆ. ಅದನ್ನು ಹರೀಶ್ ಅವರು ಪ್ರಶ್ನಿಸಿದಾಗ ಮತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದು ಹೊಯ್ಗೆ ಬಗ್ಗೆ ತಕರಾರು ತೆಗೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು ಬೊಬ್ಬೆ ಕೇಳಿ ಇತರರು ಬರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರೆ. ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಹರೀಶ್ ಕುಮಾರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಆರೋಪಿಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 341, 323, 324, 504, 506, ಹಾಗೂ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.
