
ಬೆಳ್ತಂಗಡಿ : ಚುನಾವಣಾ ನೀತಿ ಸಂಹಿತೆ ಘೋಷಣೆ ಬಳಿಕ ಬೆಳ್ತಂಗಡಿ ವಲಯ ಅಬಕಾರಿ ದಳದ ಅಧಿಕಾರಿಗಳು ಬೆಳ್ತಂಗ ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ ಒಟ್ಟು 144 ಅಕ್ರಮ ಮದ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಚ್ 16ರಂದು ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿದ್ದು ಆ ಬಳಿಕ ಎಪ್ರಿಲ್ 28ರ ವರೆಗೆ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಲ್ಲಲ್ಲಿ ಅಕ್ರಮ ಮಧ್ಯ ಸಾಗಾಟ, ಮಧ್ಯ ಮಾರಾಟ, ಮಧ್ಯ ದಾಸ್ತಾನು ಸೇರಿದಂತೆ ಹಲವು ಪ್ರಕರಣಗಳು ಕಂಡುಬಂದಿದ್ದು, ಈ ಎಲ್ಲಾ ಕಡೆಗಳಿಗೆ ಬೆಳ್ತಂಗಡಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 144 ಪ್ರಕರಣಗಳನ್ನು ದಾಖಲಿಸಿಕೊಂಡು 816.02 ಲೀಟರ್ ಅಕ್ರಮ ಮಧ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಲಾದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 4,45,539 ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆ: ಈ 144 ಪ್ರಕರಣದಲ್ಲಿ ಮಂಗಳೂರು ಡಿಸಿ ವಿಶೇಷ ಪತ್ತೆ ದಳದ ಅಧಿಕಾರಿಗಳು 8 ಪ್ರಕರಣ ಪತ್ತೆ ಹಚ್ಚಿದ್ದು. ಬಂಟ್ವಾಳ ಉಪವಿಭಾಗ ಮತ್ತು ಬೆಳ್ತಂಗಡಿ ವಲಯ ಅಬಕಾರಿ ದಳದ ಒಂಟಿ ಕಾರ್ಯಾಚರಣೆಯಲ್ಲಿ 12 ಪ್ರಕರಣ ಪತ್ತೆ ಹಚ್ಚಿದ್ದಾರೆ. ಉಳಿದ ಪ್ರಕರಣಗಳನ್ನು ಬೆಳ್ತಂಗಡಿ ವಲಯ ಅಬಕಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.
