ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿದೆಡೆ ತೀವ್ರ ಮಳೆಯ ಮರಿಣಾಮದಿಂದ ಮರಗಳು ಬಿದ್ದು, ಮತ್ತು ವಿದ್ಯುತ್ ಆಘಾತ ಉಂಟಾಗಿ ಜೀವ ಹಾನಿ ಸಹಿತ ಸಂಭವಿಸಿದ್ದರು. ಬಳಂಜ ಗ್ರಾಮದ ಹಿರಡ್ಡದಲ್ಲಿ ಮಾತ್ರ ವಿದ್ಯುತ್ ಕಂಬ ಮತ್ತು ಮರಗಳು ರಸ್ತೆಗೆ ಬಿದ್ದು ಅನಾಹುತ ಆಗಲೆಂದೇ ಅಧಿಕಾರಿಗಳು ಕಾದು ಕುಳಿತಂತಿದೆ.

ಗುರುವಾಯನಕೆರೆ-ಕಾರ್ಕಳ ಹೆದ್ದಾರಿಯ ಕಾಪಿನಡ್ಕ ತಿರುವಿನಿಂದ ಸುಮಾರು 50 ಮೀಟರ್ ದೂರದಲ್ಲಿ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಮರಡ್ಡಕ್ಕೆ ಹೋಗುವ ರಸ್ತೆಯು ಇತ್ತೀಚೆಗೆ ಅಗಲೀಕರಣವಾಗಿದ್ದು ರಸ್ತೆ ಬದಿಯ ವಿದ್ಯುತ್ ಕಂಬವು ರಸ್ತೆ ಕಡೆ ವಾಲಿ, ತಂತಿಗಳು ರಸ್ತೆ ಮದ್ಯೆ ಜೋತು ಬಿದ್ದಿದ್ದು, ಇಂದೋ ನಾಳೆಯೋ ರಸ್ತೆಯ ಮೇಲೆ ಬೀಳುವ ಸ್ಥಿತಿಯಲ್ಲಿದೆ.
ಇಲ್ಲೇ ಸ್ವಲ್ಪ ಮುಂದೆ ಸಾಗಿದಾಗ ರಸ್ತೆಯ ಬದಿಯಲ್ಲೇ ಬ್ರಹತ್ ಗಾತ್ರದ ಮರವು ರಸ್ತೆಗೆ ಬೀಳುವ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿದೆ.

ಇದರ ಬಗ್ಗೆ ಸ್ಥಳೀಯರು ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಹಾಗೂ ಪಂಚಾಯತ್ ಸದಸ್ಯರಿಗೆ ಕಳೆದ ಒಂದು ತಿಂಗಳಿನ ಹಿಂದೆಯೇ ಮಾಹಿತಿ ನೀಡಿದ್ದರೂ, ಇದುವರೆಗೆ ತೆರವು ಗೊಳಿಸುವ ಕೆಲಸ ನಡೆದಿಲ್ಲ.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ವಾಹನ ಸವಾರರು, ಸಾರ್ವಜನಿಕರು ಓಡಾಡುತ್ತಿದ್ದು, ಯಾವುದೇ ರೀತಿಯ ಅನಾಹುತ ನಡೆಯುವ ಮುನ್ನವೇ ಮೆಸ್ಕಾಂ ಇಲಾಖೆ, ಅರಣ್ಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡು ವಿದ್ಯುತ್ ಕಂಬ ಹಾಗೂ ಮರವನ್ನು ತೆರವು ಗೊಳಿಸಿ ಅನಾಹುತವನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿಸುತ್ತಿದ್ದಾರೆ.