ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಮತ್ತು ಹಾಸ್ಟೆಲ್‌ಗಳ ತ್ಯಾಜ್ಯ ನೀರು ಹಾಗೂ ಪರಿಸರದ ಕೊಳಚೆ ನೀರಿನ ಸಂಸ್ಕರಣೆಯ ನೂತನ ವಿಸ್ತರಿತ ಘಟಕಕ್ಕೆ ಇತ್ತೀಚಿಗೆ ಶಂಕು ಸ್ಥಾಪನೆ ನೆರವೇರಿತು. ಸುಮಾರು ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಘಟಕವು ಪ್ರತಿದಿನ ಹತ್ತುಲಕ್ಷ ಲೀಟರ್ ನೀರಿನ ಶುದ್ಧೀಕರಣ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ತಾಲೂಕಿನ ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದಾಗಿದೆ.

ಈ ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಸ್ಥಳೀಯ ಕೃಷಿ ಭೂಮಿಗೆ ಬಳಸುವ ಮೂಲಕ, ಕೃಷಿಗೆ ಬೆಂಬಲ ನೀಡುವ ಯೋಚನೆಯನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಮಾಡಿದ್ದು, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಹೆತ್ತವರಾದ ಸತೀಶ್ ಕುಮಾರ್ ಆರಿಗ ಬೊಳ್ಳೂರು ಗುತ್ತು ಹಾಗೂ ಶುಭಲತಾ ಅವರು ನೂತನ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿಯವರು, ಪ್ರಾಂಶುಪಾಲರು, ಆಡಳಿತಾಧಿಕಾರಿ, ಕ್ಯಾಂಪಸ್ ಮ್ಯಾನೇಜರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.