ನಡ: ಬೆಳ್ತಂಗಡಿ ತಾಲೂಕಿನ ನಡ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ.
ನಡ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಹರೀಶ್ ಅವರು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಏನಾದರೂ ಒಂದು ಮಾದರಿ ಕೆಲಸವನ್ನು ಮಾಡಬೇಕು ಎಂಬ ಉದ್ದೇಶದಿಂದ ನಡ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಮನೆಯ ಆಧಾರಸ್ತಂಭವಾಗಿದ್ದ ಶೀನಪ್ಪ ಗೌಡ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಓರ್ವ ಮಾನಸಿಕ ಭಿನ್ನ ಸಾಮರ್ಥ್ಯದ ಮಗಳ ಜೊತೆಗೆ ಜೀವನ ಸಾಗಿಸಲು ಕಷ್ಟಪಡುತ್ತಿರುವುದನ್ನು ಮನಗಂಡು ತನ್ನ ಹುಟ್ಟುಹಬ್ಬವನ್ನು ಅವರ ಕುಟುಂಬದ ಜೊತೆಗೆ ಆಚರಿಸಿಕೊಂಡರು. ಹುಟ್ಟುಹಬ್ಬದ ಪ್ರಯುಕ್ತ ಸಂಕಷ್ಟದಲ್ಲಿದ್ದ ಈ ಕುಟುಂಬಕ್ಕೆ ಅಕ್ಕಿ, ದವಸಧಾನ್ಯಗಳನ್ನು ನೀಡಿ ತನ್ನ ಕೈಲಾದಷ್ಟು ಸಹಾಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಹರೀಶ್ ಅವರ ಗೆಳೆಯರಾದ ದೀಕ್ಷಿತ್, ರಕ್ಷಿತ್, ಜೀತೆಶ್, ಕಿರಣ್, ನಿತಿನ್, ಯತೀಶ್, ಪ್ರಣಿತ್ ಉಪಸ್ಥಿತರಿದ್ದರು.
ಬಹುತೇಕ ವಿದ್ಯಾರ್ಥಿಗಳು, ಯುವಜನರು ತಮ್ಮ ಹುಟ್ಟುಹಬ್ಬವನ್ನು ಮೋಜು, ಮಸ್ತಿ ಮಾಡಿ ಆಚರಿಸುವ ಮೂಲಕ ಹಣವನ್ನು ಪೋಲು ಮಾಡುತ್ತಿರುವ ಈ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಯ ಈ ಹುಟ್ಟುಹಬ್ಬ ಆಚರಣೆ ಇತರರಿಗೆ ಮಾದರಿಯಾಗಿದೆ.