
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಸೀಟು ಕಾಡು ಎಂಬಲ್ಲಿ ಬೊಲೆರೋ ವಾಹನವೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಬಾಲಕಿ ಸಾವನ್ನಪ್ಪಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆ ಜು.27ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಬೊಲೆರೊ ಚಾಲಕ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಪ್ರಶಾಂತ್ ಸೇರಿದಂತೆ ನಾಲ್ಕು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಬೈಕ್‌ಗೆ ಬೊಲೆರೋ ಡಿಕ್ಕಿ – 6ನೇ ತರಗತಿ ಬಾಲಕಿ ಅನರ್ಘ್ಯ ಸಾವು | ಪರಾರಿಯಾದ ಬೊಲೆರೋ ತಡೆದ ಸಾರ್ವಜನಿಕರು
ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಉಜಿರೆಯಿಂದ ಮಗಳಾದ ಅನರ್ಘ್ಯ(11ವ)ಳನ್ನು ಕುಳ್ಳಿರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಹಿಂಬಾಗದಿಂದ ಅಜಾಗರೂಕತೆಯಿಂದ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ತನ್ನ ವಾಹನದಲ್ಲಿ ನೇರವಾಗಿ ಬೈಕ್‌ನ ಹಿಂಬದಿಗೆ ಡಿಕ್ಕಿಹೊಡೆದಿದ್ದು, ಘಟನೆಯಲ್ಲಿ ಬಾಲಕಿ ಮೃತಪಟ್ಟಿದ್ದು, ಬಾಲಕಿಯ ತಂದೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವೆಸಗಿದ ಬಳಿಕ ವಾಹನ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಾರ್ವಜನಿಕರು ಅವರನ್ನು ವಾಹನ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿಬಂದ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸರು, ಪ್ರಕರಣವನ್ನು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಇದೀಗ ಬೊಲೆರೊ ಚಾಲಕ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಪ್ರಶಾಂತ್ (31ವ) ವಿರುದ್ಧ ಜು.28 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 105,125A BNS,134A&B, IMV Act ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳ ಮಹಜರು ನಡೆಸಿದ ಬಳಿಕ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ. ಬೊಲೆರೊ ವಾಹನದಲ್ಲಿದ್ದ ಇತರ ಮೂವರಾದ ಪಟ್ರಮೆಯ ರಿತೇಶ್, ದಿಡುಪೆಯ ದೀಪಕ್, ನೆರಿಯದ ಶೈಲೇಶ್ ಮೇಲೂ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರು ಎಫ್.ಎಸ್.ಎಲ್ ತಂಡದ ಸೋಕೋ ಸಿಬ್ಬಂದಿ ಅರ್ಪಿತಾ ಮತ್ತು ಕಾವ್ಯಶ್ರೀ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ ಮತ್ತು ತಂಡ ಬಂದು ಮೃತಪಟ್ಟ ಬಾಲಕಿಯ ಪರಿಶೀಲನೆ ಮಾಡಿ ಮಹಜರು ನಡೆಸಿದ್ದಾರೆ.
