
ಇಂದಬೆಟ್ಟು: ಸಂಘಟನೆಯು ಮನಸು ಮಾಡಿದರೆ ಊರಿನಲ್ಲಿ ಸಂಕಷ್ಟದಲ್ಲಿರುವವರ ಕಷ್ಟಗಳು ದೂರವಾಗುವುದರಲ್ಲಿ ಸಂದೇಹವಿಲ್ಲ ಎಂಬುದಕ್ಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆದ್ರಬೆಟ್ಟು-ಇಂದಬೆಟ್ಟು ಗ್ರಾಮ ಸಮಿತಿಯು ಸಾಕ್ಷಿಯಾಗಿದೆ.

ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಜನತಾ ಮನೆ ನಿವಾಸಿ ಪೂಜಾ ಶೇಖರಗೌಡ ಎಂಬವರು ಮನೆಯ ಆಧಾರಸ್ಥಂಬವಾಗಿದ್ದ ತನ್ನ ಪತಿಯನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದು, ಮೂರು ಮಕ್ಕಳ ಜೊತೆ ಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ಅವರ ಮನೆಯಲ್ಲಿ ಮೂಲಸೌಕರ್ಯದ ಕೊರತೆ ಇದ್ದುದನ್ನು ತಿಳಿದ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆದ್ರಬೆಟ್ಟು-ಇಂದಬೆಟ್ಟು ಗ್ರಾಮ ಸಮಿತಿಯು ಇಂದಬೆಟ್ಟು ಗ್ರಾಮ ವ್ಯಾಪ್ತಿಯ ಸ್ವಜಾತಿ ಬಾಂಧವರು, ಶ್ರೀ ರಾಮ್ ಫ್ರೆಂಡ್ಸ್, ಬಿಜೆಪಿ ವಾರ್ಡ್ ನಂಬರ್ 28 ಹಾಗೂ ಊರಿನ ದಾನಿಗಳ ನೆರವಿನಿಂದ ಮನೆಗೆ ಅತೀ ಅಗತ್ಯವಾಗಿ ಬೇಕಾದ ವಿದ್ಯುತ್ ಸಂಪರ್ಕ ಹಾಗೂ ಅಡುಗೆ ಗ್ಯಾಸ್ ನ ಸಂಪರ್ಕದ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಟೀಮ್ ದೇವನಾರಿಯಿಂದ ನೀರಿನ ಟ್ಯಾಂಕ್ ವ್ಯವಸ್ಥೆ:

ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಟೀಮ್ ದೇವನಾರಿ ಇದರ ಸೇವಾ ಯೋಜನೆಯಲ್ಲಿ ಪೂಜಾ ಇವರ ಮನೆಗೆ 1 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಮತ್ತು ಅದಕ್ಕೆ ಬೇಕಾದ ಕಬ್ಬಿಣದ ಸ್ಟಾಂಡ್ ಅನ್ನು ಸಂಘಟನೆಯ ಸದಸ್ಯರು ಮತ್ತು ದಾನಿಗಳ ಸಹಕಾರದಿಂದ ಸಹಸ್ತಾಂತರಿಸುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
ಇವರ ಈ ಕೆಲಸವು ಇನ್ನಷ್ಟು ಸಂಘಟನೆಗಳಿಗೆ ಮಾದರಿಯಾಗಿ ಪ್ರತಿ ಊರಿನಲ್ಲಿಯೂ ಇಂತಹ ಸೇವಾ ಕಾರ್ಯಗಳ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳ ಕಣ್ಣೀರೊರೆಸುವ ಕಾರ್ಯ ನಡೆಯಲಿ ಎಂಬುದೇ ನಮ್ಮ ಆಶಯ.
