
ಚಿತ್ರ: ದೇವಸ್ಥಾನದಿಂದ ಅಮೃತವರ್ಷಿಣಿ ಸಭಾ ಭವನಕ್ಕೆ ವಧೂ-ವರರ ಭವ್ಯ ಮೆರವಣಿಗೆ
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಬುಧವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬದವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ಮೂಗುತಿ ಮತ್ತು ರವಿಕೆ ಕಣ ವಿತರಿಸಿದರು.
ಸಂಜೆ 5 ಗಂಟೆಗೆ ವಧೂ-ವರರನ್ನು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಯಿಂದ ಅಮೃತವರ್ಷಿಣಿ ಸಭಾಭವನಕ್ಕೆ ಕರೆದುಕೊಂಡು ಹೋಗಲಾಯಿತು. ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು.
ಗಂಟೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದಘೋಷ, ಮಂಗಳವಾದ್ಯ, ಹಾರ ವಿನಿಮಯ, ಮಂತ್ರಾಕ್ಷತೆಯೊಂದಿಗೆ ವಧುವಿಗೆ ಮಂಗಳಸೂತ್ರ ಧಾರಣೆ ಮಾಡಲಾಯಿತು.
ಸುಶ್ರಾವ್ಯ ಶೋಭಾನೆ ಹಾಡಗಳೊಂದಿಗೆ ವಧೂ-ವರರಿಗೆ ಆರತಿ ಹಾಗೂ ಮಂಗಲದ್ರವ್ಯಗಳನ್ನು ವಿತರಣೆ ಮಾಡಲಾಯಿತು. ದಾಂಪತ್ಯ ದೀಕ್ಷೆಯ ಬಳಿಕ ನೂತನ ದಂಪತಿಗಳಿಗೆ ಧರ್ಮಸ್ಥಳದ ವತಿಯಿಂದ ಉಡುಗೊರೆ ನೀಡಿ ಶುಭ ಹಾರೈಸಲಾಯಿತು. ಬಳಿಕ ನೂತನ ದಂಪತಿಗಳು ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ಪ್ರಯಾಣಿಸಿದರು.

ಚಿತ್ರ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಶ್ರದ್ಧಾ ಅಮಿತ್, ಶರ್ಮಿಳಾ, ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು.
ಸಭಾ ಕಾರ್ಯಕ್ರಮ :
ಸಮಾರಂಭದ ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನೂತನ ದಂಪತಿಗಳು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸದೊಂದಿಗೆ ಹೊಂದಾಣಿಕೆಯಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿ ಆಶೀರ್ವದಿಸಿದರು.
ಧರ್ಮಸ್ಥಳದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಸರ್ಕಾರ ಹಾಗೂ ಇತರ ಮಠ-ಮಂದಿರಗಳು ಮಾದರಿಯಾಗಿ ಸ್ವೀಕರಿಸಿ ಅನುಸರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಬೇರೆ ಕಡೆಗಳಲ್ಲಿ ನಡೆಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಇನ್ನು ಮುಂದೆ ಧರ್ಮಸ್ಥಳದಿಂದ ಮಂಗಳಸೂತ್ರ ಕೊಡಲಾಗುವುದಿಲ್ಲ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಏಕೆಂದರೆ, ಹೀಗೆ ಕೊಟ್ಟರೆ ಬೇರೆ ಕಡೆಗಳಲ್ಲಿಯೂ ಧರ್ಮಸ್ಥಳದ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡಿಬರುತ್ತದೆ. ಧರ್ಮಸ್ಥಳದಿಂದ ತಾಳಿ ಕೊಡುತ್ತಾರೆ ಎಂದಾಗ ಜನರು ಕ್ಷೇತ್ರಕ್ಕೆ ಬರುವ ಬದಲು ಅಲ್ಲೇ ಮದುವೆಯಾಗಲು ನಿರ್ಧರಿಸುತ್ತಾರೆ ಎಂದರು.

ಚಿತ್ರ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 13100ನೇ ದಂಪತಿಗೆ ಮಂಗಳಸೂತ್ರ ನೀಡಿ ಆರ್ಶೀದಿಸಿದರು.
ಮದುವೆ ಬದುಕಿನ ಬದಲಾವಣೆಯ ಪರ್ವ : ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡಿ, ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆಯ ಪರ್ವವಾಗಿದ್ದು ಧರ್ಮಸ್ಥಳದಿಂದ ನಡೆಸುವ ಬಹುಮುಖಿ ಸಮಾಜ ಸೇವಾ ಕಾರ್ಯಗಳಲ್ಲಿ ಉಚಿತ ಸಾಮೂಹಿಕ ವಿವಾಹ ಅತ್ಯಂತ ಪವಿತ್ರ ಹಾಗೂ ಪುಣ್ಯದಾಯಕ ಸೇವೆಯಾಗಿದೆ. ಸರ್ಕಾರ ಹಾಗೂ ಅನೇಕ ಮಠ-ಮಂದಿರಗಳು ಕೂಡಾ ಧರ್ಮಸ್ಥಳದ ಮಾದರಿ ಅನುಸರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಪೂಜ್ಯ ಹೆಗ್ಗಡೆ ದಂಪತಿಯ ಸಾರ್ಥಕ ಬದುಕೇ ಎಲ್ಲರಿಗೂ ಪ್ರೇರಕ ಶಕ್ತಿ ಹಾಗೂ ಮಾರ್ಗದರ್ಶಿಯಾಗಿದೆ ಎಂದು ಹೇಳಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶರ್ಮಿಳಾ ವೇದಿಕೆಯಲ್ಲಿ ಇದ್ದರು.
ಬೆಂಗಳೂರಿನಲ್ಲಿರುವ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಸ್ವಾಗತಿಸಿದರು. ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಧನ್ಯವಾದವಿತ್ತರು. ಸಂಪತ್ ಕುಮಾರ್ ರೈ ಮತ್ತು ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
