ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ಸರಳಿನಿಂದ ಪತ್ನಿಯ ತಲೆಗೆ ಹಲ್ಲೆ ನಡೆಸಿ ಆಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿಯ ಪೊಯ್ಯೆಗುಡ್ಡೆ ಎಂಬಲ್ಲಿ ಎ.26 ರಂದು ನಡೆದಿದೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಫ್ರಾನ್ಸಿಸ್ ಮೋನಿಸ್ (76ವ) ಎಂಬವರು ಎ.26 ರಂದು ರಾತ್ರಿ ಸುಮಾರು 12.30ರ ಸಮಯಕ್ಕೆ ವಿಪರೀತ ಕುಡಿದು ಜೋರಾಗಿ ಬೊಬ್ಬೆ ಹೊಡೆದುಕೊಂಡು ಮನೆಗೆ ಬಂದು 73 ವರ್ಷ ಪ್ರಾಯದ ಪತ್ನಿ ತೆರೆಸಾ ಮೋನಿಸ್ ರವರಲ್ಲಿ ಗಲಾಟೆ ಮಾಡುತ್ತಿದ್ದಾಗ ದೂರುದಾರೆ ಸೊಸೆ ಪ್ರಿಯಾ ಮತ್ತು ತನ್ನ ಗಂಡ ಕಿರಣ್ ಮೋನಿಸ್ ರವರು ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಕೋಪಗೊಂಡ ಫ್ರಾನ್ಸಿಸ್ ಮೋನಿಸ್ ಕೊಲೆ ಮಾಡುವ ಉದ್ದೇಶದಿಂದ ಅವರ ಕೈಯಲ್ಲಿದ್ದ ಬಿಳಿ ಬಟ್ಟೆ ಸುತ್ತಿದ್ದ ಸರಳಿನಿಂದ ಪತ್ನಿ ತಲೆಗೆ ತೀವ್ರ ರಕ್ತಗಾಯವಾಗುವ ರೀತಿಯಲ್ಲಿ ಹೊಡೆದಿದ್ದು, ಇದನ್ನು ಕಂಡು ಗಾಬರಿಗೊಂಡು ಹತ್ತಿರ ಹೋದಾಗ ಫ್ರಾನ್ಸಿಸ್ ಮೋನಿಸ್ ಸರಳನ್ನು ಅಲ್ಲಿಯೇ ಬೀಸಾಡಿ ರೂಮಿಗೆ ಹೋಗುವಾಗ ಮಗ ಮತ್ತು ಸೊಸೆಯನ್ನು ಉದ್ದೇಶಿಸಿ ನನ್ನ ತಂಟೆಗೆ ಬಂದರೆ ಇದೇ ರೀತಿ ಮಾಡುತ್ತೇನೆ ಎಂದು ಬೆದರಿಸಿದ್ದಾರೆ.

ನಂತರ ಗಾಯಗೊಂಡ ತೆರೆಸಾ ಮೋನಿಸ್ ಅವರನ್ನು ಮನೆಯವರು ಹಾಗೂ ನೆರೆಮನೆಯ ಸೇರಿ ಖಾಸಗಿ ವಾಹನವೊಂದರಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕೊಂಡುಹೋಗಲು ತಿಳಿಸಿದಂತೆ ಗಾಯಳನ್ನು ಮಂಗಳೂರು ಕೆಎಂಸಿ ಅತ್ತಾವರ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಸರಳಿನಿಂದ ತನ್ನ ಅತ್ತೆಗೆ ಹೊಡೆದ ಆಪಾದಿತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೊಸೆ ಪ್ರಿಯಾ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿ ಮೇಲೆ ಕೊಲೆ ಯತ್ನ ನಡೆಸಿದ ಪತಿ ಫ್ರಾನ್ಸಿಸ್ ಮೋನಿಸ್(76ವ) ಕೂಡ ಕೊಲೆ ಯತ್ನ ಮಾಡುವ ವೇಳೆ ಗಾಯಗೊಂಡಿದ್ದರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಆರೋಪಿ ಫ್ರಾನ್ಸಿಸ್ ಮೋನಿಸ್ ವಿರುದ್ಧ ಬೆಳ್ತಂಗಡಿ ಪೊಲೀಸರು BNS -2023 (109,351(2)) ಅಡಿಯಲ್ಲಿ ಎ.27 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading