ಸ್ವಾತಂತ್ರ್ಯ ದಿನಾಚರಣೆ ಅಂದ ಕೂಡಲೇ ಮೊದಲು ನೆನಪಿಗೆ ಬರುವುದು ನಮ್ಮೆಲ್ಲರ ಬಾಲ್ಯ. ಆ ದಿನಗಳೇ ಹಾಗಿತ್ತು ಸ್ವಾತಂತ್ರ ಹೋರಾಟಗಾರರ ಬಲಿದಾನ ,ತ್ಯಾಗ ಯಾವುದರ ಅರಿವು ನಮಗಿರಲಿಲ್ಲ ಬದಲಿಗೆ ಹೊಸ ಯೂನಿಫಾರಂ, ಕೈ ತುಂಬಾ ಹೊಸ ಕೇಸರಿ, ಬಿಳಿ, ಹಸಿರು ಬಣ್ಣದ ಬಳೆಗಳು, ಕೈಯಲ್ಲಿ ಒಂದು ಬಾವುಟ ಹಿಡಿದು ಶಾಲೆಗೆ ಹೋಗುವುದು ,ಮತ್ತು ಶಾಲೆಯಲ್ಲಿ ವಾರಗಳಿಂದ ಕಂಠಪಾಠ ಮಾಡಿದ ದೇಶಪ್ರೇಮದ ಸ್ವಾತಂತ್ರ ಹೋರಾಟಗಾರರ ನೆನಪಿನ ಹಾಡುಗಳನ್ನ ಹಾಡುವುದು, ಭಾಷಣವನ್ನು ಎಲ್ಲರ ಮುಂದೆ ನಿಂತು ಮಾಡುವುದೇ ದೊಡ್ಡ ಸಂತಸ. ಆ ದಿನ ಶಾಲೆಯಲ್ಲಿ ಕೊಟ್ಟ ಸಿಹಿ ತಿಂಡಿಯಾ ರುಚಿ ಮರೆಯುವುದುಂಟೆ.? ಅಪ್ಪಿ ತಪ್ಪಿ ಒಂದು ಲಡ್ಡು ಜಾಸ್ತಿ ಸಿಕ್ಕರೆ ಅದೇ ಸಂಭ್ರಮ.ಸಮಯ ಒಂದೇ ರೀತಿ ಇರುವುದಿಲ್ಲ ಕಾಲ ಕಳೆದಂತೆ ಬಾಲ್ಯದ ನಮ್ಮ ಮುಗ್ಧತೆ ಮರೆಯಾಗಿದೆ. ಇವತ್ತು ನಮಗೆ ಸ್ವಾತಂತ್ರ್ಯ ದಿನಾಚರಣೆ ಎಂದರೆ ರಜಾ ದಿನವಷ್ಟೇ. ಕಾಲೇಜು , ಕಚೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನ ಕೇವಲ ನಾಮಕವಸ್ಥೆಗೆ ಆಚರಿಸುತ್ತೇವೆ.

“ದೇಶ ಸೇವೆ ಈಶ ಸೇವೆ” ಎಂಬ ಮಾತನ್ನು ನಾವುಗಳು ಖಂಡಿತ ಕೇಳಿರುತ್ತೇವೆ ದೇಶಕ್ಕಾಗಿ ತುಂಬಾ ಜನ ಬಲಿದಾನ ನೀಡಿದ್ದಾರೆ. ನಾವು ದೇಶಕ್ಕಾಗಿ ಪ್ರಾಣ ಬಿಡದೆ ಹೋದರು ನಮ್ಮ ಯೋಧರು ,ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮ ಮತ್ತು ತ್ಯಾಗವನ್ನು ಸ್ಮರಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಸಾವಿರಕ್ಕೂ ಹೆಚ್ಚು ಜನರು ಹಸಿವಿನಿಂದ ನರಳಾಡಿದರು, ತಮ್ಮ ಮನೆ ಕುಟುಂಬ ಮಕ್ಕಳನ್ನ ತೊರೆದು ದೇಶಕ್ಕಾಗಿ ತಮ್ಮಜೀವ ಜೀವನವನ್ನೇ ಪಣವಾಗಿಟ್ಟು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅಂತಹ ಈ ದಿನವನ್ನ ನಾವು ಮೋಜು ಮಸ್ತಿಗೆ ಮೀಸಲಾಗಿಸಿರುವುದು ವಿಪರ್ಯಾಸ..

ಇತ್ತೀಚಿಗೆ ನಾವುಗಳು ರಾಷ್ಟ್ರ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ,ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಸೇರಿ ಹಲವು ದಿನಗಳನ್ನು ರಜಾ ದಿನವಾಗಿ ಪರಿಗಣಿಸಿದ್ದೇವೆ ಎಂಬುದು ಕಹಿ ಸತ್ಯ. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಾಟೀಲ್, ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ ಆ ರ್ ಅಂಬೇಡ್ಕರ್ ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಕೇವಲ ಪಠ್ಯಪುಸ್ತಕದ ಭಾಗವಾಗಿದ್ದಾರೆ.

ದೇಶಪ್ರೇಮ ಎಂಬುದು ಯುವ ಜನತೆಯಲ್ಲಿ ಮರೀಚಿಕೆಯಾಗಿದೆ. ಜನರು ರಾಷ್ಟ್ರೀಯ ಹಬ್ಬದ ದಿನಗಳನ್ನು ಪ್ರವಾಸಕ್ಕೆ, ಸ್ನೇಹಿತರೊಂದಿಗೆ ಮೋಜು- ಮಸ್ತಿಗೆ ಮೀಸಲಿಡುತ್ತಿದ್ದಾರೆ. ಆದರೆ ಈ ದಿನ ನಮಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ ಅಂದರೆ ನಾವಿಂದು ಇಷ್ಟೊಂದು ಆರಾಮವಾಗಿ ಸ್ವಾತಂತ್ರ್ಯವಾಗಿ ನಮ್ಮಿಷ್ಟದ ಬದುಕನ್ನ ಬದುಕುವುದಕ್ಕೆ ಆಗುತ್ತಿರಲಿಲ್ಲ ಎಂಬುದನ್ನು ಯಾರೊಬ್ಬರೂ ಯೋಚಿಸುವುದಿಲ್ಲ, ಎಂಬುದು ವಿಪರ್ಯಾಸ. ಸರ್ಕಾರ, ಖಾಸಗಿ ಕಂಪನಿಗಳು ವರ್ಷದ ಕ್ಯಾಲೆಂಡರ್ ನಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಕೆಂಪು ಬಣ್ಣದ ಅಕ್ಷರಗಳಲ್ಲಿ ರಜಾ ದಿನವಾಗಿ ಬರೆಯದೆ ಆ ದಿನವನ್ನು ವಿಶೇಷವಾಗಿ ದೇಶಕ್ಕಾಗಿ ಮೀಸಲಿಡಬೇಕು ಮತ್ತು ರಾಷ್ಟ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯವನ್ನು ಕೈಗೊಳ್ಳಬೇಕು.

ನಮ್ಮ ದೇಶ ನಮ್ಮ ಹೆಮ್ಮೆ .
ನಮ್ಮಲ್ಲಿ ದೇಶಪ್ರೇಮ ಮೊಳಕೆ ಒಡೆಯದೆ ಹೋದರೆ ಅಭಿವೃದ್ಧಿ ಹೊಂದುವ ಹಾದಿಯಲ್ಲಿರುವ ನಮ್ಮ ದೇಶ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ.

ಕವನ ಚಾರ್ಮಾಡಿ
ತೃತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಕಾಲೇಜು ಉಜಿರೆ.

 


Discover more from Nammura Suddi

Subscribe to get the latest posts sent to your email.

Leave a Reply

You missed