ಬೆಳ್ತಂಗಡಿ: ಬೆಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿ ಮೂಲದ ಯುವ ವಕೀಲರೊಬ್ಬರು ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಮದುವೆಯಾಗುವುದಿಲ್ಲವೆಂದು ವಂಚಿಸಿದ್ದಲ್ಲದೆ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬೆಂಗಳೂರು ನಗರದ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪಿ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲ್ಕೊಡಿ ನಿವಾಸಿ ಜಿಜೊ ಪೌಲ್ ಮಗ ಬೆಳ್ತಂಗಡಿ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಜಿತಿನ್ ಜಿಜೋ (26ವ) ಎಂಬಾತನಾಗಿದ್ದಾನೆ.ಸಂತ್ರಸ್ತ ಮಹಿಳೆ ನೀಡಿದ ದೂರಿನಲ್ಲಿ ಏನಿದೆ: ಬೆಂಗಳೂರು ನಿವಾಸಿಯಾಗಿರುವ 36 ವರ್ಷ ಪ್ರಾಯದ ದೂರುದಾರ ಮಹಿಳೆಗೆ 2021 ರಲ್ಲಿ ಮದುವೆಯಾಗಿದ್ದು ಮದುವೆಯಾದ ಮೇಲೆ ಪತಿಯ ವರ್ತನೆ ಸರಿ ಹೋಗದ ಕಾರಣ ದೂರುದಾರರು ಅವರ ಗಂಡನ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ದಾವೇ ಹೂಡಿದ್ದು ಈ ಸಮಯದಲ್ಲಿ ದೂರುದಾರ ಮಹಿಳೆಗೆ 2025ರ ಫೆಬ್ರವರಿ ತಿಂಗಳಲ್ಲಿ ಯಲಹಂಕದಲ್ಲಿ ವಾಸವಿರುವ ಯುವ ವಕೀಲ ಜಿತಿನ್ ಜಿಜೊ ಅವರ ಪರಿಚಯವಾದ್ದರಿಂದ ದೂರುದಾರ ಮಹಿಳೆ ಅವರ Domestic Violence ಪ್ರಕರಣವನ್ನು ನಡೆಸುತ್ತಿದ್ದ ಕಾರಣ, ಅವರನ್ನು ವಕೀಲರಾಗಿ ನೇಮಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರಕರಣದ ವಿಚಾರವಾಗಿ ಮಾತನಾಡುತ್ತಿದ್ದು ಜಿತಿನ್ ಜಿಜೊಗೆ ದೂರುದಾರ ಮಹಿಳೆ ಮೇಲೆ ಪ್ರೀತಿ ಹುಟ್ಟಿದ್ದರಿಂದ ಈ ವಿಚಾರವನ್ನು ದೂರುದಾರ ಮಹಿಳೆಗೆ ತಿಳಿಸಿದ್ದೆನೆಂದರೆ, ನನಗೆ ನಿನ್ನ ಮೇಲೆ ಪ್ರೀತಿ ಇದೆ, ನಾನು ನಿನ್ನ ಪ್ರಕರಣವನ್ನು ಬಗೆಹರಿಸಿ ನಿನ್ನ ಗಂಡನಿಂದ ನಿನಗೆ ಮುಕ್ತಿ ನೀಡಿ ನಿನ್ನನ್ನು ಮದುವೆಯಾಗುತ್ತೇನೆ, ನಾನು ನಿನ್ನನ್ನು ಬಿಟ್ಟು ಇರಲು ಆಗುತ್ತಿಲ್ಲಾ ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ನಾನು ಸಹ ನೀನು ವಾಸವಾಗಿರುವ ಏರಿಯಾದಲ್ಲಿ ವಾಸವಾಗಿರುತ್ತೇನೆಂದು ತಿಳಿಸಿ ದೂರುದಾರರು ವಾಸವಾಗಿರುವ ಮನೆಯ 3ನೇ ಮಹಡಿಯ ಮನೆಯನ್ನು ಬಾಡಿಗೆ ಪಡೆದುಕೊಂಡು ವಾಸವಾಗಿರುತ್ತಾರೆ.
ದೂರುದಾರ ಮಹಿಳೆಯ ಮನೆಯಲ್ಲಿರುವಾಗ ಅವರು ಸಹ ಅವರ ಕೆಲಸವನ್ನು ಮುಗಿಸಿಕೊಂಡು ಆಗಾಗ್ಗೆ ದೂರುದಾರ ಮಹಿಳೆ ವಾಸವಿರುವ ಮನೆಗೆ ಬಂದು ಆ ಸಮಯದಲ್ಲಿ ದೂರುದಾರರು ಬೇಡವೆಂದರೂ ಕೂಡಾ ದೂರುದಾರ ಮಹಿಳೆಯ ಜೊತೆ ಹಲವಾರು ಬಾರಿ ಲೈಗಿಂಕ ಸಂಪರ್ಕ ಬೆಳೆಸಿದ್ದಾನೆ, ಅಲ್ಲದೆ 2026ರಲ್ಲಿ ದೂರುದಾರ ಮಹಿಳೆಗೆ ಪತಿಯೊಂದಿಗೆ ವಿಚ್ಛೇದನ ಲಭಿಸಿದ್ದು, ಇದಾದ ಬಳಿಕ ಕ್ರಮೇಣವಾಗಿ ದೂರುದಾರ ಮಹಿಳೆ ಮೇಲೆ ಅನುಮಾನ ಪಟ್ಟು ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಅವರ ಜೊತೆ ಇದ್ದೀಯಾ ಎಂದು ಅನುಮಾನ ಪಟ್ಟು ಕೆಟ್ಟ ಪದಗಳಿಂದ ನಿಂದಿಸಿರುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸೆ.2 ರಂದು ದೂರುದಾರ ಮಹಿಳೆ ವಾಸವಾಗಿರುವ ಮನೆಗೆ ಬಂದಿದ್ದು ದೂರುದಾರರ ಮೊಬೈಲ್ ತೆಗೆದುಕೊಂಡು Signal App ನಲ್ಲಿದ್ದ ದೂರುದಾರ ಮಹಿಳೆ ಮತ್ತು ಜಿತಿನ್ ಜಿಜೊ ರವರ ಮಧ್ಯೆ ನಡೆದಿರುವ ಎಲ್ಲಾ ವೈಯಕ್ತಿಕ ಸಂಭಾಷಣೆಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿದ್ದರು. ದೂರುದಾರ ಮಹಿಳೆ ಆ ಸಂದೇಶಗಳನ್ನು ಏಕೆ ಅಳಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಆರೋಪಿ ಅತ್ಯಂತ ಹಿಂಸಾತ್ಮಕವಾಗಿ ನೀನು ಈಗ ಸಾಯಲೇ ಬೇಕು ಇಲ್ಲದಿದ್ದರೆ ನನ್ನ ವಕೀಲ ವೃತ್ತಿಗೆ ಅವಮಾನ ಆಗುತ್ತದೆ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ ಎಂದು ಹಿಡಿದುಕೊಂಡು ಅವರ ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿ, ಎದೆ, ಬೆನ್ನು, ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಕೈಯಿಂದ ನಿರಂತರವಾಗಿ ಹೊಡೆದರು. ಬಾಯಿಂದ ದೂರುದಾರ ಮಹಿಳೆಯ ಮೈ ಕೈಗೆಲ್ಲಾ ಕಚ್ಚಿ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ ಅಲ್ಲಿಯೇ ಇದ್ದ ಸ್ಟಾಂಡ್ ಫ್ಯಾನ್ ಅನ್ನು ತೆಗೆದುಕೊಂಡು ದೂರುದಾರ ಮಹಿಳೆಗೆ ಹೊಡೆದು ನಂತರ ವೇಲ್ ಒಂದನ್ನು ತೆಗೆದುಕೊಂಡು ಅವರ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದಾಗ ದೂರುದಾರ ಮಹಿಳೆ ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿಹೋಗಿರುತ್ತಾರೆ.
ನಂತರ ಅಲ್ಲಿಂದ ಬಂದು ಹತ್ತಿರದಲ್ಲಿರುವ ಎನ್.ಆರ್.ಆರ್. ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಬಳಿಕ ಪೊಲೀಸರಿಗೆ ದೂರು ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೀಗ ಆರೋಪಿ ಬೆಳ್ತಂಗಡಿ ನಿವಾಸಿ ಯುವ ವಕೀಲ ಜಿತಿನ್ ಜಿಜೊ(26) ಎಂಬಾತನ ವಿರುದ್ಧ ಸೆ.3 ರಂದು ಬೆಂಗಳೂರು ನಗರದ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ BNS-2023 (u/s69,126(2),115(2),118(1),74,351(2),352,238) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾದ ಬಳಿಕ ಯುವ ವಕೀಲ ಜಿತಿನ್ ಜಿಜೊ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಬೇಕಿದೆ.

 


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading