ಹಗಲು-ರಾತ್ರಿ, ಚಳಿ,ಮಳೆ-ಗಾಳಿಯೆಂದು ಲೆಕ್ಕಿಸದೆ ಪ್ರತಿದಿನ ಮೌನವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಕತ್ತಲೆ ಒಳಗೆ ಬೆಳಕನ್ನು ನೀಡುವುದಕ್ಕೆ ಪ್ರಯತ್ನ ಪಡುವ ಕರೆಂಟ್ ಮ್ಯಾನ್ ಗಳನ್ನು ನಿಜ ಬದುಕಿನ ಹೀರೋಗಳು ಅಂತ ಕರೆದರೆ ಖಂಡಿತ ತಪ್ಪಾಗುವುದಿಲ್ಲ. ಅವರ ಬದುಕನ್ನು ಸ್ಮರಿಸುವುದಕ್ಕೆ ನಾವು ಪ್ರತಿದಿನ ಅವರಿಗೆ ಶಾಪ ಹಾಕುವ ಭರದಲ್ಲಿ ಮರೆತೇ ಹೋಗಿದ್ದೇವೆ ಅಲ್ಲವೇ..?

ಹವಾಮಾನದಲ್ಲಿ ಅದೇನೇ ಬದಲಾವಣೆ ಇದ್ದರೂ ಕಂಬದ ಮೇಲೆ ಏರಿ ಕಟಿಂಗ್ ಪ್ಲೇಯರ್ ಹಿಡಿದು, ತಂತಿಯ ಸುರುಳಿಯ ಕೈಯಲ್ಲಿ ಹೊತ್ತು ಲೈನ್ ದುರಸ್ತಿಯನ್ನು ಸರಿ ಮಾಡುವ ಬರದಲ್ಲಿ ಜೀವ ಅಪಾಯ ಎದುರಾದರು ಯಾವುದಕ್ಕೂ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಮರೆಯದೆ ಸದಾ ದುಡಿಯುವ ಎಲ್ಲಾ ಪವರ್ ಮ್ಯಾನ್ ಗಳಿಗೆ ನಮ್ಮದೊಂದು ಸಲಾಂ. ಒಂದು ವೇಳೆ ಕರೆಂಟ್ ಮ್ಯಾನ್ ಗಳು ತಮ್ಮ ಕರ್ತವ್ಯ ಮರೆತು ಕೆಲಸ ಮಾಡದೆ ಹೋದರೆ ಇತರ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ಬೀಳುವುದು ಮಾತ್ರ ಸುಳ್ಳಲ್ಲ..

ಹೇಗೆ ನಮಗೆ ಕತ್ತಲಲ್ಲಿ ಮಾತ್ರ ಬೆಳಕಿನ ನೆನಪು ಬರುತ್ತದೆಯೋ ಅಂತಯೇ ಮನೆಯಲ್ಲಿ ಒಂದು ಐದು ನಿಮಿಷ ಕರೆಂಟ್ ಹೋದರೆ ಮಾತ್ರ ನಮಗೆ ಕರೆಂಟ್ ಮ್ಯಾನ್ ಗಳು ನೆನಪಿಗೆ ಬರುತ್ತಾರೆ. ಕರೆಂಟ್ ಹೋಗಿ ಹೊತ್ತು ಕಳೆದರು ಇನ್ನೂ ಬಂದಿಲ್ಲ ಅಂತ ಅದೆಷ್ಟು ಸರಾಗವಾಗಿ ಅವರಿಗೆ ನಾವು ಶಾಪ ಹಾಕಿಬಿಡುತ್ತೇವೆ ಅಲ್ಲವೇ ..?
ಆದರೆ, ಒಮ್ಮೆಯು ಯೋಚಿಸುವುದಿಲ್ಲ ಜೋರಾದ ಮಳೆಗೆ ಕರೆಂಟ್ ಕಂಬ ಬಿದ್ದಾಗ ಅದರ ದುರಸ್ತಿ ಕಾರ್ಯಗಳನ್ನು ಮಾಡುತ್ತಿರುವವರು ನಮ್ಮಂತೆ ಮನುಷ್ಯರು. ಅವರಿಗೂ ಬದುಕಿದೆ ಎಲ್ಲದಕ್ಕಿಂತ ಮಿಗಿಲಾಗಿ ಅವರಿಗೂ ಕುಟುಂಬ ಇದೆ ಎಂಬುದನ್ನು ಮರೆಯದಿರೋಣ.
ಕರೆಂಟ್ ಮ್ಯಾನ್ ಗಳ ಪರಿಶ್ರಮ, ತ್ಯಾಗ ಕೆಲಸದ ಮೇಲಿರುವ ನಿಷ್ಠೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಗುಡ್ಡ ಪ್ರದೇಶ, ಕಾಡು ದಾರಿ ಬೆಟ್ಟದ ತಪ್ಪಲು ಮನುಷ್ಯರೇ ನಡೆದಾಡಲು ಕಷ್ಟಪಡುವ ಜಾಗಗಳಲ್ಲಿ ನಮ್ಮ ನಿಜ ಬದುಕಿನ ಹೀರೋಗಳ ಹೆಜ್ಜೆ ಗುರುತುಗಳು ಇರುತ್ತದೆ. ಯಾವುದನ್ನು ಲೆಕ್ಕಿಸದ ಇವರ ಕೆಲಸ ನಿಷ್ಠೆ , ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಮಾದರಿ.

ತಮ್ಮ ಕುಟುಂಬಸ್ಥರಿಂದ ದೂರವಾಗಿ ಅಪರಿಚಿತರ ಬದುಕನ್ನ ಬೆಳಗಿಸುವ ಪವರ್ ಮ್ಯಾನ್ ಗಳು ಜಗತ್ತಿಗೆ ಬೆಳಕು ನೀಡುವ ಸೂರ್ಯನಂತೆ ಕಾಣುತ್ತಾರೆ. ಇವರ ದುಡಿಮೆಯ ಬೆವರಿನ ಬೆಲೆಯೇ ನಮ್ಮ ಬದುಕಿನ ಬೆಳಕು.ಆದರಿಂದ ಅವರ ಕಾರ್ಯವನ್ನು, ಶ್ರಮವನ್ನು ಮರೆಯದಿರೋಣ ಶಾಪ ಹಾಕುವ ಬದಲು ಕರೆಂಟ್ ಬರಬಹುದು ಎಂದು ಸ್ವಲ್ಪ ಹೊತ್ತು ಕಾಯುವ ತಾಳ್ಮೆ ಕಳೆದುಕೊಳ್ಳದಿರೋಣ. ಅಷ್ಟೇ ಅಲ್ಲದೆ ಇಲ್ಲಿ ಪ್ರತಿಯೊಬ್ಬರ ಕೆಲಸವನ್ನು ಶ್ರಮವನ್ನು ಗೌರವಿಸೋಣ, ಇನ್ನೊಬ್ಬರ ಕೆಲಸವನ್ನ ಕೀಳಾಗಿ ಕಾಣದೆ ಪ್ರತಿಯೊಬ್ಬರ ಬದುಕನ್ನ ಸ್ಮರಿಸುವುದಕ್ಕೆ ಮರೆಯದಿರೋಣ.

 

ಕವನ ಚಾರ್ಮಾಡಿ
ತೃತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಕಾಲೇಜು ಉಜಿರೆ

 

 

 

Leave a Reply

Discover more from Nammura Suddi

Subscribe now to keep reading and get access to the full archive.

Continue reading