ಕೊಕ್ಕಡ: ತನ್ನ ಪರಿಚಯಸ್ಥರ ಮಗಳು ಎಂದು ಅಪ್ರಾಪ್ತ ಬಾಲಕಿಯನ್ನು ರಾತ್ರಿ ವೇಳೆ ಹಾಸನ ಕಡೆಗೆ ಕರೆದುಕೊಂದು ಹೋಗುತ್ತಿರುವ ವೇಳೆ ಗುಂಪೊಂದು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಘಟನೆ ಕೊಕ್ಕಡದ ಕಾಪಿನಬಾಗಿಲು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ಐವರು ಮತ್ತು ಬಾಲಕಿಯನ್ನು ಕರೆದುಕೊಂಡು ಹೋದಾತನ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಎರಡು ಕಡೆಯವರಿಂದಲೂ ದೂರು ದಾಖಲಾಗಿದ್ದು, ಕಾರ್ಕಳ ಈದು ನಿವಾಸಿ ಶೈಕ್ ಮುಕ್ತಾರ್ (50ವ) ಎಂಬಾತ ನೀಡಿದ ದೂರಿನಂತೆ ತಾನು ಕೆಲಸದ ನಿಮಿತ್ತ ಆ. 11ರಂದು ರಾತ್ರಿ ತನ್ನ ಪರಿಚಯಸ್ಥರೊಬ್ಬರ ಅಪ್ರಾಪ್ತ ಪ್ರಾಯದ ಮಗಳನ್ನು ಕರೆದುಕೊಂಡು ಹಾಸನ ಕಡೆಗೆ ಕಾರಿನಲ್ಲಿ ತೆರಳುತ್ತಾ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ, ಅಲ್ಲಿ ಸೇರಿದ್ದ ಕೆಲವು ಜನರ ಗುಂಪು ತನ್ನ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ವಿಚಾರಿಸಿ, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆ ಎನ್ನಲಾಗಿದ್ದು, ಈ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 106/2026, ಕಲಂ: 189(2), 191(2), 126(2), 353(2), 352, 115(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳಾದ ಕೊಕ್ಕಡ ನಿವಾಸಿ ಧನುಷ್ (23ವ), ಚಾಮಾಡಿ ನಿವಾಸಿ ದಿನೇಶ್ (45ವ), ಪುದುವೆಟ್ಟು ನಿವಾಸಿ ಪೂರ್ಣಕ್ಷ ಬಿ (40ವ), ಕೊಕ್ಕಡ ನಿವಾಸಿ ಸೂರಜ್ (25ವ) ಮತ್ತು ಕೊಕ್ಕಡ ನಿವಾಸಿ ರಂಜಿತ್ ಬಂಡಾರಿ (29ವ) ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿದೂರು: ಘಟನೆಗೆ ಸಂಬಂಧಿಸಿದಂತೆ, ಅಪ್ರಾಪ್ತ ಬಾಲಕಿಯ ತಾಯಿ ಪ್ರತಿದೂರು ನೀಡಿದ್ದು, ಆರೋಪಿ ಶೇಕ್ ಮುಕ್ತಾರ್ (50ವ) ಎಂಬಾತನು ತನ್ನ ಮಗಳನ್ನು ಬಲವಂತವಾಗಿ ಆತನ ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: ZERO FIR 03/2026, ಕಲಂ: 137(2)ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Discover more from Nammura Suddi
Subscribe to get the latest posts sent to your email.
