ಉಜಿರೆ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಸ.ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಅವರ ಪತ್ನಿ ರಾಜೀವಿ ಎಂಬವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬವರು ಸಂಪೂರ್ಣ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ ವಿಲಕ್ಷಣಕಾರಿ ಘಟನೆ ನಡೆದಿದೆ.


ರಾಜೀವಿಯವರು ಸದ್ರಿ ಮನೆಯಲ್ಲಿ ಪತಿ‌ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಅಲ್ಲದೆ ಇದೇ ಸ್ಥಿರಾಸ್ತಿಯಲ್ಲಿ ಅಡಿಕೆ ಮತ್ತು ತೆಂಗು ಕೃಷಿಯನ್ನೂ ಮಾಡಿರುತ್ತಾರೆ. ಹೀಗಿರುವಲ್ಲಿ ಫೆ.27ರಂದು 11.00 ಗಂಟೆಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಫೀಕ್ ಎಂಬವರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿರುತ್ತಾರೆ. ಅಲ್ಲದೇ ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನು ಇನ್ನಿತ್ಯಾದಿ ಎಲ್ಲಾ ವಸ್ತುಗಳನ್ನು ಮನೆಯಿಂದ ತೆಗೆದು ಬೀದಿಗೆ ಎಸೆದಿದ್ದಾರೆ. ಈ ಕೃತ್ಯದ ಬಗ್ಗೆ ದಂಪತಿಯ ಅಪ್ರಾಪ್ತ ಪ್ರಾಯದ ಮಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಈ ಅಕ್ರಮ ಕೆಲಸವನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದಾಗ. “ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.


ಭಯಗೊಂಡ ಅಪ್ರಾಪ್ತ ಬಾಲಕಿ ಜೋರಾಗಿ ಅಳುತ್ತಿದ್ದ ಸಂದರ್ಭದಲ್ಲಿ ನೆರೆಕರೆಯವರಾದ ತ್ಯಾಗರಾಜ್ ಮತ್ತು ಜಯ ಇವರು ಸ್ಥಳಕ್ಕೆ ಧಾವಿಸಿ ರಫೀಕ್ ರ ಕೃತ್ಯವನ್ನು ಪ್ರಶ್ನಿಸಿದಾಗ ತ್ಯಾಗರಾಜ್ ಮತ್ತು ಜಯ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ‘ತನ್ನ ವಿಷಯಕ್ಕೆ ಬಂದಲ್ಲಿ ನಿಮ್ಮಿಬ್ಬರ ಮನೆಯನ್ನು ಕೂಡಾ ಒಡೆದುಹಾಕುತ್ತೇನೆ” ಎಂದು ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರು ಕೇಳಿಬಂದಿದೆ.
ಇದೀಗ ಇಡೀ ಘಟನೆಯ ದೃಷ್ಯಾವಳಿಗಳೂ ಸಹಿತ ಫೋಟೋ ಹೊಂದಿರುವ ಪೆನ್‌ಡ್ರೈವನ್ನು ದೂರಿನ ಜೊತೆಗೆ ಲಗತ್ತಿಸಿ ಪೊಲೀಸ್ ಇಲಾಖೆಗೆ ಸಲ್ಲಿಸಿದ್ದಾರೆ. ಇದರಿಂದಾಗಿ ನಮಗೆ 10 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮಕ್ಕೆ ಅಣಿಯಾಗಿದ್ದಾರೆ.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading