ಉಜಿರೆ: ಮುನಿಗಳ ವಿಹಾರ, ಧಾಮಸಂಪ್ರೋಕ್ಷಣೆ, ಬಸದಿಗಳ ಪಂಚಕಲ್ಯಾಣ, ಧಾರ್ಮಿಕ ಶಿಬಿರ, ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ, ಜಿನಭಜನೆ ಹಾಡುವುದು ಮೊದಲಾದ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ ಅವರಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು ಎಂದು ಭಾರತೀಯ ಜೈನ್‌ಮಿಲನ್ ವಲಯ ಎಂಟರ ಉಪಾಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬೆಳ್ತಂಗಡಿ ಜೈನ್‌ಮಿಲನ್‌ನ ನೂತನ ಅಧ್ಯಕ್ಷ ಡಾ. ಸನ್ಮತಿ ಕುಮಾರ್ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜೈನ್‌ಮಿಲನ್ ಅಂತರಾಷ್ಟ್ರೀಯ ಸಂಘಟನೆಯಾಗಿದ್ದು ಅಲ್ಲಲ್ಲಿ ಜೈನ್‌ಮಿಲನ್ ಶಾಖೆಗಳನ್ನು ಆರಂಭಿಸಿ ಯುವಜನತೆಯನ್ನು ತೊಡಗಿಸಿಕೊಂಡು ಸಮಾಜದ ಸಂಘಟನೆ ಮತ್ತು ಬಲವರ್ಧನೆಯಾಗಬೇಕು. ಜೀವನದಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಭಾರತೀಯ ಜೈನ್‌ಮಿಲನ್ ವಲಯ ಎಂಟರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ತನ್ನ ಅವಧಿಯಲ್ಲಿ ಮಾಡಿದ ಸೇವೆ, ಸಾಧನೆಗಳನ್ನು ಸ್ಮರಿಸಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಧೀಮತಿ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಡಾ. ರಜತಾ ಪಿ. ಶೆಟ್ಟಿ, ಬಿ. ಪ್ರಮೋದ್ ಕುಮಾರ್, ಬಿ. ಸೋಮಶೇಖರ ಶೆಟ್ಟಿ, ಬಿ. ಭುಜಬಲಿ ಧರ್ಮಸ್ಥಳ, ಧರಣೇಂದ್ರ ಕುಮಾರ್ ಜೈನ್ ಶುಭಾಶಂಸನೆ ಮಾಡಿದರು.
ನೂತನ ಅಧ್ಯಕ್ಷ ಡಾ. ಸನ್ಮತಿ ಕುಮಾರ್ ಮಾತನಾಡಿ ಧಾರ್ಮಿಕ ಶಿಬಿರ, ಆಹಾರೋತ್ಸವ, ಕ್ರೀಡಾಕೂಟಗಳು, ವೃತ್ತಿಮಾರ್ಗದರ್ಶನ ಶಿಬಿರ, ಶೈಕ್ಷಣಿಕ ಸಮಾವೇಶದ ಮೂಲಕ ಸಮಾಜದ ಸಂಘಟನೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಧರ್ಮಸ್ಥಳದ ಬಿ. ಭುಜಬಲಿ, ಟಿ.ಸಿ.ಬಿ. ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಕುಮಾರಿ ಲಾಸ್ಯ, ಉಜಿರೆ ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಸುಮನ್ ಕುಮಾರ್ ಜೈನ್ ಧನ್ಯವಾದವಿತ್ತರು. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಧರ್ಮಪಾಲ ಜೈನ್ ಶಾಂತಿಮಂತ್ರ ಪಠಣ ಮಾಡಿದರು.


Discover more from Nammura Suddi

Subscribe to get the latest posts sent to your email.

Leave a Reply

Discover more from Nammura Suddi

Subscribe now to keep reading and get access to the full archive.

Continue reading