ಕಲ್ಮಂಜ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇದರ ಮುಖ್ಯಕಾರ್ಯನಿರ್ವಹಕರ ವಿರುದ್ಧ ಸದಸ್ಯರ ಹೆಸರಿನಲ್ಲಿ ನಕಲಿ ಸಹಿ ಬಳಸಿದ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿ ಅಪಪ್ರಚಾರ ಮಾಡಿದ ವ್ಯಕ್ತಿಗಳ ವಿರುದ್ಧ ಧರ್ಮಸ್ಥಳ ಠಾಣೆ, ಸಹಕಾರ ಇಲಾಖೆ ಮತ್ತು ದ. ಕ ಹಾಲು ಒಕ್ಕೂಟಕ್ಕೆ ಮುಖ್ಯ ಕಾರ್ಯನಿರ್ವಾಹಕರು ದೂರು ನೀಡಿದ ಘಟನೆ ಸೆ.29ರಂದು ನಡೆದಿದೆ.
ದೂರಿನ ಸಾರಾಂಶ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಳೆದ ಕೆಲ ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಘದ ಬಗ್ಗೆ ಸಂಘದ ಸದಸ್ಯರಲ್ಲದಿದ್ದರೂ ತಾನು ಸಂಘದ ಪ್ರಮುಖ ಸದಸ್ಯನೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಕುರಿತಂತೆ ನಿಡಿಗಲ್ ಅಕ್ಷಯ ನಗರದ ನಿವಾಸಿ ರಾಜ್ ಕಿಶನ್ ಪಿಂಟೊ ಎಂಬವರು ಕಲ್ಮಂಜ ಬೀಜದಪಾಡಿ ನಿವಾಸಿ ದರ್ಶನ್ ಕೆ.ಪಿ. ರವರೊಂದಿಗೆ ಸೇರಿಕೊಂಡು ಸಂಘದ ಹೆಸರು ಬಳಸಿಕೊಂಡು ಸಂಘ ಹಾಗೂ ಸಂಘದ ಸದಸ್ಯರ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಸಾರ ಮಾಡುತ್ತಿರುವುದು ಅಲ್ಲದೆ, ಕೆಲವು ನಕಲಿ ಸಹಿಗಳನ್ನು ಒಳಗೊಂಡ ಮನವಿಯನ್ನು ಸಿದ್ಧಪಡಿಸಿ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿರುವುದು. ಇದೇ ರೀತಿಯಲ್ಲಿ ಇವರ ಜೊತೆ ಕಲ್ಮಂಜ ನಿವಾಸಿ ದಿನೇಶ್ ರವರು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಂಘದ ಕುರಿತು ಸುಳ್ಳು ಮತ್ತು ಆಧಾರರಹಿತ ಮಾಹಿತಿಯ ಪೋಸ್ಟ್‌ಗಳನ್ನು ಪ್ರಸಾರ ಮಾಡಿ ಮಾನ ಹಾನಿ ಮಾಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಈ ಕೃತ್ಯಗಳಿಂದ ಸಂಘದ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಸದಸ್ಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಸುಳ್ಳು ಮತ್ತು ಆಧಾರ ರಹಿತ ಪೋಸ್ಟ್ ಮಾಡಿ ಮಾನ ಹಾನಿ ಮಾಡಿರುವ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಧರ್ಮಸ್ಥಳ ಠಾಣೆಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ದೂರು ನೀಡಿರುತ್ತಾರೆ.
ಜೊತೆಗೆ ಸಂಘದ ಕಚೇರಿಗೆ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸಹಕಾರ ಇಲಾಖೆ, ದ.ಕ. ಹಾಲು ಒಕ್ಕೂಟ ಸೇರಿದಂತೆ ಸಂಘದ ವಿಶೇಷಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
Discover more from Nammura Suddi
Subscribe to get the latest posts sent to your email.
