ಬೆಂಗಳೂರು, ಜು. 21: ಧರ್ಮಸ್ಥಳ ದೇವಸ್ಥಾನದ ವಿರುದ್ಧ 200 ಕೋಟಿ ರೂ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ಚಿನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ, ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
ಧರ್ಮಸ್ಥಳದಲ್ಲಿ ತಾನು ಕಾನೂನು ಬಾಹಿರವಾಗಿ ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದ ಚಿನ್ನಯ್ಯ ಎಸ್.ಐ.ಟಿ. ತನಿಖೆಯ ಬಳಿಕ ತಾನು ಸುಳ್ಳು ಹೇಳುತ್ತಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿ ಜೈಲು ಸೇರಿದ್ದ ಇದಾದ ಬಳಿಕ ಆತ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದ.

ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ವಿಚಾರಣೆ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕೂಡ ನ್ಯಾಯಾಲಯಕ್ಕೆ ತನ್ನ ತನಿಖೆ ಪೂರ್ಣಗೊಂಡಿದ್ದು, ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಚಿನ್ನಯ್ಯ ಮಾಡಿರುವ ಆರೋಪಗಳಿಗೆ ಎಸ್‌ಐಟಿ ವಿರೋಧವನ್ನೂ ವ್ಯಕ್ತಪಡಿಸಿದೆ.
ಚಿನ್ನಯ್ಯ ತಮ್ಮ ಅರ್ಜಿಯಲ್ಲಿ ಸೌಜನ್ಯ ಹೋರಾಟಗಾರರು, ನಟ ಪ್ರಕಾಶ್ ರಾಜ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ್ ಸೇರಿದಂತೆ ಕೆಲವರು ರೂ 200 ಕೋಟಿ ಹಣಕಾಸಿನ ನೆರವಿನೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಕಳಂಕ ತರುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ಗಿರೀಶ್ ಮಟ್ಟೆಣ್ಣವರ ಹಾಗೂ ಮಹೇಶ್ ತಿಮರೋಡಿ ತಮ್ಮ ಮೇಲೆ ಒತ್ತಡ ಹೇರಿ ಹೇಳಿಕೆ ನೀಡಿಸಿದ್ದಾರೆ ಎಂದು ಸಹ ದೂರಿದ್ದರು.
ರಮಾ ನಾಗರಾಜ್ ಪರ ಹಿರಿಯ ವಕೀಲೆ ವೃಂದಾ ಗೋವರ್, ವಕೀಲ ನಿತಿನ್, ಹಾಗೂ ಹಿರಿಯ ವಕೀಲ ಬಾಲನ್ ಅವರ ತಂಡ ಜಯಂತ್ ಟಿ. ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಸಾಮಾಜಿಕ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಹಾಗೂ ಹೋರಾಟಗಾರರನ್ನು ಬೆದರಿಸಲು ಮತ್ತು ಮಾನಸಿಕವಾಗಿ ಕುಗ್ಗಿಸಲು ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರ ಪರ ವಾದಿಸಲಾಯಿತು.
ಪ್ರಕರಣದ ಕುರಿತು ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಚಿನ್ನಯ್ಯ ಸಲ್ಲಿಸಿದ್ದ ರೂ 200 ಕೋಟಿ ಷಡ್ಯಂತ್ರದ ಆರೋಪಗಳ ಅರ್ಜಿ ವಜಾಗೊಂಡಿದೆ.
Discover more from Nammura Suddi
Subscribe to get the latest posts sent to your email.
