ಆಧುನಿಕ ಜಗದ ಅರಿವಿಲ್ಲದೆ ಗ್ರಾಮೀಣ ಅಥವಾ ತೀರಾ ಹಳ್ಳಿ ಪ್ರದೇಶಗಳಲ್ಲಿ ಬದುಕುತ್ತಿರುವ ಯುವ ಮನಸ್ಸುಗಳು ನನ್ನಂತೆ ‘ಬಾವಿ ಒಳಗಿನ ಕಪ್ಪೆಯಂತೆ’ ಜೀವನ ಸಾಗಿಸುತ್ತಿರುತ್ತಾರೆ. ಅಮ್ಮ ಅಪ್ಪ, ಸ್ನೇಹಿತರು ಮನೆ ಕಾಲೇಜು ನಮ್ಮ ಊರು ಜೊತೆ-ಜೊತೆಗೆ ಸುತ್ತಮುತ್ತಲಿನ ಊರುಗಳು ಇದಿಷ್ಟೇ ನಮ್ಮ ಚೌಕಟ್ಟಿನ ಒಳಗಿರುವ ಪುಟ್ಟ ಪ್ರಪಂಚ.
ನನ್ನಂತೆ ಅದೆಷ್ಟೋ ಯುವ ಮನಸುಗಳಿಗೆ ಹೊರಗಿನ ನಗರ ಜೀವನದ ಪರಿಚಯವೇ ಇರುವುದಿಲ್ಲ ಎಂಬುದೇ ವಿಪರ್ಯಾಸ. ಆದರೆ ಕೆಲವೊಮ್ಮೆ ಕೆಲವು ಅನಿವಾರ್ಯತೆಗಳಿಗೆ ಕಟ್ಟಿ ಬಿದ್ದು ಅರಿವಿರದ ಊರಿಗೆ ಹೋಗುವ ಅವಕಾಶ ಎದುರಾಗುತ್ತದೆ. ಅಂತೆಯೇ ನನ್ನ ಪಾಲಿಗೆ ಒಲಿದ ಅನಿವಾರ್ಯತೆಯ ಹೆಸರೇ ಇಂಟರ್ಶಿಪ್ ಈ ಬಾರಿ ಡಿಗ್ರಿ ದ್ವಿತೀಯ ಪತ್ರಿಕೋದ್ಯಮ ತರಗತಿಯ ಅಂತಿಮ ಪರೀಕ್ಷೆಗಳು ಮುಗಿದ ಬಳಿಕ ರಜೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಂಟರ್ಶಿಪ್ ಮಾಡಲೇಬೇಕೆಂಬ ಅನಧಿಕೃತ ನಿಯಮಯೊಂದು ಕಾಲೇಜಿನಲ್ಲಿ ಜಾರಿಯಾಗಿತ್ತು.
ಅದರಂತೆ ಬೆಂಗಳೂರಿನ ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ಬಾರಿ ನನ್ನ ಇಂಟರ್ಶಿಪ್ ಮಾಡುವುದಾಗಿ ನಿರ್ಧರಿಸಿ ಬೆಂಗಳೂರಿಗೆ ತೆರಳುವುದಕ್ಕೆ ಎಲ್ಲಾ ಸಿದ್ಧತೆಗಳು ಮುಗಿದಿತ್ತು. ಆದರೆ ಇಂಟರ್ಶಿಪ್ ಗಿಂತ ಕಡಲೂರಿನಿಂದ ಅಪರಿಚಿತ ಊರಾದ ಬೆಂದಕಾಳೂರಿಗೆ ಹೋಗಿ ಒಂದು ತಿಂಗಳು ಅಲ್ಲಿ ಹೇಗೆ ದಿನಗಳ ದೂಡುವುದು ಎಂಬುದೇ ದೊಡ್ಡ ತಲೆ ನೋವಾಗಿತ್ತು. ನನ್ನ ಪಾಲಿಗೆ ರಾಜಧಾನಿ ಒಂದು ಬಗೆಯಲ್ಲಿ ವಿದೇಶದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ.
ನನ್ನ ಕನಸಿನ ಸಕಾರಕ್ಕೆ, ಹೊಸ ಕಲಿಕೆ ವಿಚಾರಗಳನ್ನ ಕಲಿಯುವ ಸಲುವಾಗಿ ನಾನು ನಮ್ಮೂರಿನ ಕೆಂಪು ಬಸ್ ಹತ್ತಿ ಬೆಂಗಳೂರಿಗೆ ಬಂದು ತಲುಪಿದ್ದಾಗಿತ್ತು. ಬೆಂಗಳೂರು ಒಂದು ವಿಶಾಲವಾದ ಸಮುದ್ರದಂತೆ, ಕಷ್ಟವಾದರೂ ಇಷ್ಟಪಟ್ಟು ನೀರಿಗೆ ಧುಮುಕಿದ್ದಾಗಿದೆ, ಅದೆಷ್ಟೇ ಸವಾಲುಗಳು, ತೊಂದರೆಗಳು ಎದುರಾದರು ಎಲ್ಲವನ್ನ ಹೊಸ ಕಲಿಕೆ ಎಂದೇ ಭಾವಿಸಿ ಈಜಿ ದಡ ಸೇರಲೇ ಬೇಕೆಂದು ಯೋಚಿಸುತ್ತಾ ಚಾಮರಾಜಪೇಟೆಯ ಪೀಜಿಗೆ ನಾ ಬಂದು ತಲುಪಿದ್ದಾಗಿತ್ತು..
ಚಾಮರಾಜಪೇಟೆಯಿಂದ ಖಾಸಗಿ ಸುದ್ದಿ ವಾಹಿನಿ ಇದ್ದಂತ ಟೌನ್ ಹಾಲ್ ಎಂಬ ಸ್ಥಳಕ್ಕೆ ಸಂಚರಿಸುವುದೇ ದೊಡ್ಡ ಸರ್ಕಸ್ ಆಗಿತ್ತು ಸುತ್ತಲೂ ಸುಮಾರು ಬಿ.ಎಂ.ಟಿ.ಸಿ. ಬಸ್ಸುಗಳು ಸಂಚರಿಸುತ್ತಿದ್ದರು ಯಾವ ಬಸ್ ಅದ್ಯಾವ ನಿಲ್ದಾಣವನ್ನ ತಲುಪುತ್ತವೆ ಎಂಬುದನ್ನ ನಮ್ಮೂರಿನಲ್ಲಿ ಕೆಎಸ್‌ಆರ್ಟಿಸಿ ಬಸ್ಸುಗಳು ತನ್ನ ಬೋರ್ಡ್‌ಗಳ ಮೂಲಕ ತಿಳಿಸಿದರೆ ಇಲ್ಲಿ 34ಡಿ 107ಎ ಈ ರೀತಿಯ ನಂಬರ್ ಗಳ ಮೂಲಕವೇ ತಿಳಿಯಬಹುದಾಗಿತ್ತು.
ನಾವು ಹೋಗಬೇಕಾಗಿರುವ ಏರಿಯಾದ ನಂಬರ್ ಗಳಿರುವ ಬಸ್ ಅನ್ನು ಪತ್ತೆ ಹಚ್ಚಿ ಆ ಬಸ್ಸಿನಲ್ಲಿ ಹತ್ತಿ ಕೂತರು, ಈ ಬಸ್ ನಮ್ಮ ಏರಿಯಾಗೆ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಪಕ್ಕದಲ್ಲಿ ಕೂತವರ ಬಳಿ ಕೇಳಿ ಖಾತ್ರಿಪಡಿಸಿಕೊಳ್ಳದೆ, ಅಥವಾ ನಮ್ಮ ಏರಿಯಾದ ಹೆಸರು ಹೇಳಿ ’ಸ್ವಲ್ಪ ಆ ಸ್ಟಾಪ್ ಬಂದಾಗ ಹೇಳ್ತೀರಾ’..? ಅಂತ ಮುಂದಾಲೋಚನೆಯಿಂದ ಹೇಳದೆ ಹೋದಲ್ಲಿ ಅದ್ಯಾಕೋ ಸಮಾಧಾನವಿಲ್ಲ.
ಹೀಗೆ ಬೆಂಗಳೂರಿನಲ್ಲಿ ಸರಿಯಾದ ಬಸ್ ಗಳನ್ನು ಪತ್ತೆ ಹಚ್ಚುವುದು ಮೊದಮೊದಲು ಹಿಂಸೆ ಅನಿಸಿದರೂ ಸರಿಯಾದ ಬಸ್ ನಲ್ಲಿ ಕೂತಾಗ ಆಗುವ ಸಂತೋಷವೇ ಬೇರೆ. ಊರಿನಲ್ಲಿ ಅರ್ಧ ಗಂಟೆಗೊಂದು ಬೆರಳೆಣಿಕೆಯಷ್ಟು ಬಸ್ ಗಳು ಬಂದರೆ ಅದುವೇ ದೊಡ್ಡ ಸಂಗತಿ ಎಂಬ ವಾತಾವರಣದಲ್ಲಿ ಬದುಕಿದ ನಮಗೆ ಬೆಂಗಳೂರಿನ ಬಿ.ಎಂ.ಟಿ.ಸಿ. ಬಸ್ ಗಳಲ್ಲಿ ಸಂಚರಿಸುವುದೇ ದೊಡ್ಡ ಸಾಧನೆ!
ಇನ್ನೂ ಹೋಗಬೇಕಾಗಿರುವ ಜಾಗಕ್ಕೆ ತೆರಳುವುದಕ್ಕೆ ಸ್ವಲ್ಪ ತಡವಾದರೂ ಬಸ್ ಹತ್ತಿ ಹೋಗುವುದಕ್ಕೆ ಸಮಯವಿಲ್ಲವಾದರೆ, ನಮ್ಮನ್ನ ಸಮಯಕ್ಕೆ ಸರಿಯಾಗಿ ಆ ಜಾಗಕ್ಕೆ ತಲುಪಿಸಲು ಓಲಾ, ಉಬರ್, ರಾಪಿಡೋಗಳ ಬೈಕ್ ಕಾರ್ ಸ್ಕೂಟಿ ಆಟೋಗಳ ಸಾರಥಿಗಳು ಸದಾ ಸಿದ್ದರಿರುತ್ತಾರೆ. ಊರಿನಲ್ಲಿ ಅಪ್ಪ ಅಣ್ಣಂದಿರ ಬೈಕ್ ಅಥವಾ ಸ್ಕೂಟಿಯನ್ನು ಬಿಟ್ಟು ಬೇರೆಯವರ ಗಾಡಿಯಲ್ಲಿ ಕೂರುವುದಕ್ಕೆ ಹಿಂಜರಿಯುವ ಹೆಚ್ಚಿನವರು ಇಲ್ಲಿ ಅನಿವಾರ್ಯತೆಗೆ ಅಪರಿಚಿತರ ಬೈಕ್ ಸ್ಕೂಟಿಯ ಹಿಂದೆ ಕೂರುವ ಅನಿರೀಕ್ಷಿತ ಭಾಗ್ಯ ಒಂದು ಒಲಿದು ಬರುವುದಂತೂ ವಿಪರ್ಯಾಸ..
ಹಸಿವಿನ ಬೆಲೆ ಅರ್ಥಪೂರ್ಣವಾಗಿಯೇ ಈ ಊರಿನಲ್ಲಿ ಅರ್ಥವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರು, ಜೀವನ ಸಾಗಿಸುವುದಕ್ಕೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವಿವಿಧ ಕಾಯಕದಲ್ಲಿ ತೊಡಗಿರುವ ಜನರ ಪರದಾಟ, ಜೀವನ ಪ್ರೀತಿ ನಿಜಕ್ಕೂ ಅದ್ಭುತ.
ಸಾವಿರಾರು ರೂಪಾಯಿಗಳನ್ನ ಕಟ್ಟಿ, ಪಿಜಿ ಸೇರಿಕೊಂಡರು ಊಟ ಸರಿಯಾಗಿದೆ ಹೊರಗೆ ಹೋಟೆಲಿನಲ್ಲಿ ದುಡ್ಡು ಕೊಟ್ಟು ತಿನ್ನುವಾಗ ಅಮ್ಮನ ಕೈ ತುತ್ತು ಅವಳು ಮಾಡುತ್ತಿದ್ದ ಅಡುಗೆಯ ಬೆಲೆ ಸಾವಿರ ಸಲ ನೆನಪಾಗುತ್ತದೆ.. ಉಪ್ಪಿಲ್ಲ, ಊಟ ಬಿಸಿ ಇಲ್ಲ ಎಂದು ಪ್ರತಿಯೊಂದಕ್ಕೂ ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯಲ್ಲಿ ತಪ್ಪು ಹುಡುಕುವ ಮನಸುಗಳು, ಕಷ್ಟವಾದರೂ ಇಷ್ಟಪಟ್ಟು ಪಿಜಿ ಊಟ ತಿನ್ನುವಾಗ ಮನೆ ಊಟ ನೆನಪಾಗಿ ಕಾರಣವೇ ಇಲ್ಲದ ಕಣ್ತುಂಬಿ ಬರುತ್ತದೆ..
ಇನ್ನು ಬದುಕಿನ ಸಣ್ಣ ಪುಟ್ಟ ತೊಂದರೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಂದುಕೊಂಡವರಿಗೆ, ಅಯ್ಯೋ ನನ್ನ ಬದುಕು ಯಾಕೆ ಹೀಗೆ, ಜಗದಲ್ಲಿರುವ ಎಲ್ಲಾ ತೊಂದರೆಗಳು ನನಗೆ ಮಾತ್ರ ಜೀವನದಲ್ಲಿ ನನಗೆ ಯಾರು ಇಲ್ಲ, ನಾ ಇಷ್ಟಪಟ್ಟಿದ್ದು ಯಾವುದು ಆಗುವುದಿಲ್ಲ ಎಂದು ಸದಾ ಕೊರಗುವವರಿಗೆ ಬೆಂಗಳೂರಿನಲ್ಲಿ ಒಂದು ತುತ್ತಿನ ಊಟಕ್ಕೂ ಪರದಾಡುತ್ತಾ ಬದುಕನ್ನ ಬದುಕುವುದಕ್ಕಾಗಿ ಕಷ್ಟಪಟ್ಟು ದುಡಿಯುವ ಪ್ರತಿಯೊಬ್ಬ ಶ್ರಮಜೀವಿಯು ನಿಜವಾದ ಸ್ಪೂರ್ತಿ.
ಎಲ್ಲಾ ತೊಂದರೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಎಂದುಕೊಂಡು ಬದುಕುವವರಿಗೆ ಇಲ್ಲಿನ ಜನರ ಜೀವನವೇ ಒಂದು ದೊಡ್ಡ ಮಾದರಿ ಎಂದರೆ ತಪ್ಪಾಗದು.
ಕಂಫರ್ಟ್ ಜೋನ್ ಅಂದರೆ ಸದಾ ಬದುಕಿನಲ್ಲಿ ಒಂದು ಚೌಕಟ್ಟಿನೊಳಗೆ ಇದೇ ಬದುಕು, ಇದೇ ಪ್ರಪಂಚ ಎಂದು ಭಾವಿಸಿ ಬದುಕುವ ಅದೆಷ್ಟೋ ಜನರಿಗೆ ಹೊಸ ಅನುಭವದೊಂದಿಗೆ ತಮ್ಮ ಸಾಮರ್ಥ್ಯ ಏನಿದೆ ಎಂದು ವಿಭಿನ್ನ ರೀತಿಯಲ್ಲಿ ಅರಿವಾಗುತ್ತದೆ ಬೆಂದಕಾಳೂರಿನಲ್ಲಿ!
ಗುರಿಯ ಕಡೆಗೆ ಸಾಗುವ ಹಾದಿಯಲ್ಲಿ ಆತ್ಮವಿಶ್ವಾಸವನ್ನ ಹೆಚ್ಚಿಸುವುದಕ್ಕೆ ಬದುಕಿಗೊಂದು ಬುನಾದಿಯನ್ನ ಪರೋಕ್ಷವಾಗಿ ಈ ಊರು ಇಲ್ಲಿ ಸಿಕ್ಕ ಅಮೂಲ್ಯ ಅನುಭವಗಳು ಸಂಬಂಧಗಳು ಹೊಸ ವಿಚಾರಗಳು, ಅಪರಿಚಿತ ಜನರು ಹಾಕಿ ಕೊಟ್ಟಿದ್ದಾರೆ ಎಂದರೆ ಸುಳ್ಳಾಗದು.
ನನ್ನ ಪಾಲಿಗೆ ಇಂಟೆನ್ಶಿಪ್ ರೀತಿಯಲ್ಲಿ ಬಂದ ಈ ಸುವರ್ಣ ಅವಕಾಶ ನನಗೆ ನನ್ನ ಸಾಮರ್ಥ್ಯ ಏನೆಂಬುದನ್ನ ಅರಿವಾಗಿಸುವಂತೆ ಮಾಡಿದೆ, ಆದರಿಂದ ಬದುಕಿನಲ್ಲಿ ಸಿಗುವ ಹೊಸ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸದ ಬದುಕಿನ ಹೊಸ ಕಲಿಕೆ ಎಂದು ಭಾವಿಸಿ ಬದುಕೆಂಬ ಸಾಗರದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಿ ಈಜಿ ದಡ ಸೇರಿ ಬಿಡಿ, ಬದುಕಿನಲ್ಲಿ ಎದುರಾಗುವ ಕಹಿ ಘಟನೆಗಳನ್ನ ಬದುಕಿನ ಅನುಭವವೆಂದು ತಿಳಿಯಿರಿ. ಬದುಕು ಅದೆಷ್ಟು ದೂರ ಕರೆದುಕೊಂಡು ಹೋಗುತ್ತದೆಯೋ ಅಲ್ಲಿ ತನಕ ಹೋಗುವ ಕಾಯಕವಷ್ಟೇ ನಮ್ಮದು.
ಬೆಂಗಳೂರಿನಲ್ಲಿ ಸಿಕ್ಕ ಸಿಹಿ ಕಹಿ ನೆನಪುಗಳು ಹೊಸ ಪರಿಚಯ ಆವಿಷ್ಕಾರಗಳಿಗೆ ಲೆಕ್ಕವೇ ಇಲ್ಲ ಹಾಗಾಗಿ ಬದುಕಿನಲ್ಲಿ ಏನು ಮಾಡದೇ ಸುಮ್ಮನೆ ಕೂತು ಕೆಡುವುದಕ್ಕಿಂತ ಏನಾನ್ನಾದರೂ ಮಾಡಿ ಕೆಡುವುದು ಉತ್ತಮ ಎಂಬ ಮಾತಿನಂತೆ ಏನಾದರೂ ಪ್ರಯತ್ನಿಸಿ ಸೋತರು ಅದು ಸೋಲಿಗಿಂತ ಹೊಸ ಅನುಭವವಾಗಿ ಬದುಕಿನಲ್ಲಿ ಬದಲಾಗುತ್ತದೆ.
ಬದುಕಿಗೊಂದು ವಿಶಿಷ್ಟ ಅನುಭವವನ್ನು ಬೆಂಗಳೂರು ಧಾರೆ ಎರೆದಿತ್ತು ಜನರು ಹೀಗೂ ಇರ್ತಾರ ಹೀಗೆಯೂ ಇರಬಹುದಾ” ಅಂತ ವಿಭಿನ್ನ ವ್ಯಕ್ತಿಗಳನ್ನ ವಿಶಿಷ್ಟ ವ್ಯಕ್ತಿತ್ವಗಳನ್ನ ಪರಿಚಯಿಸಿದ್ದು ಇದೇ ಊರು.
ಹೊಸ ಹೊಸ ಪರಿಚಯ, ವಾತಾವರಣ, ಊಟ, ಊರು ಜನ ವ್ಯಕ್ತಿಗಳು ಹೀಗೆ ಎಲ್ಲವೂ ಮೊದಮೊದಲು ಕಷ್ಟ ಅನಿಸಿದರೂ ಅನಿವಾರ್ಯತೆಗೆ ಎಲ್ಲವೂ ಹೊಸ ಅನುಭವಗಳಾಗಿ ಬದಲಾಗಿತ್ತು!
ಬೆಂಗಳೂರಿಗೆ ಕಂತೆ ಕಂತೆ ನಿರೀಕ್ಷೆಗಳ ಮನದೊಳಗೆ ಹೊತ್ತು ಬಂದವಳು ನಾನು ಆದರೆ ಬದುಕಿನ ನಿರೀಕ್ಷೆಗಳಿಗೂ ವಾಸ್ತವತೆಗೂ ಇರುವ ವ್ಯತ್ಯಾಸವನ್ನು ಅರ್ಥಪೂರ್ಣವಾಗಿ ಅನುಭವಗಳ ಜೊತೆ ಪ್ರತಿದಿನ ಅರಿವಾಗುವಂತೆ ಮಾಡಿದ್ದು ಬೆಂದಕಾಳೂರು..
ಒಂದು ತಿಂಗಳ ಇಂಟರ್ಶಿಪ್ ಮುಗಿಸಿ ಹಿಂತಿರುಗಿ ಮತ್ತೆ ಊರಿನ ಬಸ್ಸು ಹತ್ತುವಾಗ, ಮೊದಲ ದಿನ ಅಪರಿಚಿತವಾಗಿದ್ದ ಈ ಊರು ಈಗ ಅದೆಷ್ಟು ಬದಲಾವಣೆಗಳು ನನ್ನ ವ್ಯಕ್ತಿತ್ವ ಬದುಕಿನಲ್ಲಿ ತಂದಿದೆ ಎಂಬುದರ ಅರಿವು ನನಗಾಗಿತ್ತು. ಹಾಗಾಗಿ ಮೌನವಾಗಿಯೇ ಮನದೊಳಗೆ ಬೆಂದಕಾಳೂರಿಗೆ ಧನ್ಯವಾದ ಹೇಳುವುದಕ್ಕೆ ಈ ಕಡಲೂರಿನ ಹುಡುಗಿ ಮರೆಯಲಿಲ್ಲ..!!

ಕವನ ಚಾರ್ಮಾಡಿ
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಂ. ಕಾಲೇಜು ಉಜಿರೆ

Discover more from Nammura Suddi
Subscribe to get the latest posts sent to your email.
