ಮಡಂತ್ಯಾರು: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆಚ್ಚಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಸ್ತೆ ಅಗಲಿಕರಣ ಕಾಮಗಾರಿಯು ನಡೆಯುತ್ತಿದ್ದು, ಅಲ್ಲಲ್ಲಿ ಅವೈಜ್ಞಾನಿಕ ರೀತಿಯ ಕಾಮಗಾರಿಗಳು ಮತ್ತು ಬೇಜವಾಬ್ದಾರಿಯ ಕಾಮಗಾರಿಗಳಿಂದ ಸಾರ್ವಜನಿಕರು ಸಂಕಷ್ಟವನ್ನು ಅನುಭವಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಡಂತ್ಯಾರು ಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯ ಅವ್ಯವಸ್ಥೆಯಿಂದ ಕೂಡಿದ್ದು, ಚರಂಡಿ ನಿರ್ಮಿಸಲು ರಸ್ತೆಯ ಪಕ್ಕದಲ್ಲಿ ಗುಂಡಿ ತೋಡಿದ್ದನ್ನು ಮುಚ್ಚದೆ ಇರುವುದರಿಂದ ಸಾರ್ವಜನಿಕರು ನಡೆದಾಡಲು ಕಷ್ಟಪಡುವಂತಾಗಿದೆ. ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಶಾಲಾ ಕಾಲೇಜುಗಳು ಕೂಡಾ ಆರಂಭವಾಗುತ್ತಿದೆ. ಮಳೆಗಾಲದಲ್ಲಿ ಮಳೆಯ ನೀರು ಈ ಗುಂಡಿಗಳಲ್ಲಿ ತುಂಬಿ ಸಾರ್ವಜನಿಕರು ಮತ್ತು ವಾಹನ ಸವಾರರು ಅಪಾಯಕ್ಕೆ ಸಿಲುಕುವ ಸಂಭವವಿದೆ.

ರಸ್ತೆ ಕಾಮಗಾರಿಯಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡಲು ಕೂಡಾ ಸರಿಯಾದ ದಾರಿಯ ವ್ಯವಸ್ಥೆ ಇಲ್ಲದಾಗಿದ್ದು, ಮಂಗಳೂರು ಕಡೆಗೆ ಹೋಗುವ ಬಸ್ ನಿಲ್ದಾಣದ ಮುಂಭಾಗದಲ್ಲಿ ದೊಡ್ಡ ಹೊಂಡ ತೋಡಿ ಮಣ್ಣು ರಾಸಿ ಹಾಕಲಾಗಿದೆ.

ಉಪ್ಪಿನಂಗಡಿ ಕಡೆಗೆ ಹೋಗುವ ರಸ್ತೆ ತಿರುವಿನಲ್ಲಿ ಹೊಂಡವನ್ನು ಮುಚ್ಚದೆ ಬಿಡಲಾಗಿದ್ದು, ಸರ್ವಿಸ್ ರಸ್ತೆಯ ವ್ಯವಸ್ಥೆ ಇಲ್ಲದೆ ವ್ಯಾಪಾರ ಮಳಿಗೆಗಳಿಗೆ ಬರುವ ಗ್ರಾಹಕರ ವಾಹನಗಳು ರಸ್ತೆಯಲ್ಲೇ ನಿಲ್ಲುಸುವಂತಾಗಿದೆ.

ಅನೇಕ ವರ್ಷಗಳಿಂದ ಮಡಂತ್ಯಾರು ಪೇಟೆಯಲ್ಲಿದ್ದ ಅಟೋ ಪಾರ್ಕಿಂಗ್ ಈಗ ಮಾಯವಾಗಿದ್ದು, ಅಟೋ ರಿಕ್ಷಾಗಳಿಗೆ ನಿಲ್ಲಲು ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸದೆ ರಿಕ್ಷಾ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯನ್ನು ಸುಗಮ ಸಂಚಾರದ ದೃಷ್ಟಿಯಿಂದ ಅಗಲೀಕರಣಗೊಳಿಸಲಾಗುತ್ತಿದ್ದರೂ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಗಿದ್ದು, ಇದು ಮತ್ತಷ್ಟು ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ರಸ್ತೆ ಅಗಲೀಕರಣದ ಹೆಸರಿನಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗಿದ್ದು, ಇದು ರಸ್ತೆಯ ಅಗಲೀಕರಣವೋ ಅಪಾಯಕ್ಕೆ ಆಹ್ವಾನವೋ ಎಂದು ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೂಡಲೇ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ.

Discover more from Nammura Suddi
Subscribe to get the latest posts sent to your email.
