ವರ್ಷಗಳು ಕಳೆದು ಊರಿನ ವಾತಾವರಣದಲ್ಲಿ ಬದಲಾದರೂ, ನಮ್ಮೂರ ಉದ್ದರಿ ಗಿರಾಕಿಗಳ ಸಂತೆ ಮಾತ್ರ ನಿರಂತರವಾಗಿದೆ. ಶುಕ್ರವಾರಕೊಮ್ಮೆ ಊರಂಗಳದ ಬಳಿ ಜನ ಜಂಗುಳಿಯ ನಡುವೆ ನಡೆವ ಸಂತೆಯ ವಾತಾವರಣ ಇಂದಿಗೂ ಬದಲಾಗಿಲ್ಲ. ವ್ಯಾಪಾರಕರ ಚತುರತೆ, ಗ್ರಾಹಕರ ವಿನಂಮ್ರತೆ, ಅಲ್ಲದೆ ಊರ ಜನ ಮತ್ತು ವ್ಯಾಪಾರಕರ ನಡುವಿನ ಅವಿನಾಭಾವ ಸಂಬಂಧಗಳ ಬೆಸುಗೆಯು ಕೋಳಿ ಜಗಳಗಳಿಂದ ಹದಗೆಡದೆ ಇರುವುದು ನಮ್ಮೂರ ಸಂತೆಯ ಸಂತಸದ ಸಂಗತಿ.

ವರ್ಷಗಳು ಉರುಳಿದ ಬಳಿಕ, ಬಾಲ್ಯದಲ್ಲಿ ಅಮ್ಮನೊಟ್ಟಿಗೆ ಸಂತೆಗೆ ಹೋದವನು, ಇಂದು ಅಮ್ಮನ ಕೆಲಸದ ಬಿಡುವಿಗಾಗಿ ಒಂಟಿಯಾಗಿ ಸಂತೆಯಲಿ ನಿಂತಿರುವೆ. ಸರಿಯಾಗಿ ನಾಲ್ಕರ ವೇಳೆಗೆ ನಮ್ಮೂರ ಅಂಗಳಕೆ ಸಂತೆ ಹೊತ್ತು ಪರಸ್ಥಳದ ಪ್ರಯಾಣಿಕರು ನಮ್ಮ ಹಳ್ಳಿಗೆ ಬಂದಿಳಿಯುವರು. ಮತ್ತು ತಮ್ಮ ಸಂತೆಯ ಗಂಟು ಮೂಟೆಯನ್ನು ಅವರವರ ಕಾಯಂ ಜಾಗದಲ್ಲಿ, ಚೀಲ, ಹಾಸಿಗೆಯಲಿ ಬಿಚ್ಚಿಟ್ಟು, “ವ್ಯಾಪಾರವಾಗಲಿ ಗಲೆ (ಹಣದ ಪೆಟ್ಟಿಗೆ) ತುಂಬಲಿ” ಎಂಬ ಉದ್ದೇಶದಿಂದ ಎಲ್ಲಾ ತರಕಾರಿ, ಹಣ್ಣು ಹಂಪಲು, ವಸ್ತುಗಳನ್ನು ಆಕರ್ಷಣೀಯವಾಗಿ ಹೊಂದಿಸಿಟ್ಟು ಯಕ್ಕ, ಯವ್ವ, ತಂಗಿ ಬರ್ರೀ ಬೇ, ಯವ್ವ ತಾಜಾ ಮಾಲ್ ಎಂದು ಕೂಗು ಹಾಕುತ್ತಿರುವುದು , ಒಂದೆಡೆ ಆದರೆ..
ವಾರಪೂರ್ತಿ ಶ್ರಮಪಟ್ಟು ದುಡಿದ ಕೂಲಿಯವನಿಗೆ ಮಾಲಿಕನಿಂದ ಕೈಗೆ ಹಣ ಸಿಕ್ಕಾಕ್ಷಣ ಮನೆ ಮರೆತು ಸಾರಾಯಿ ಸೇವಿಸಿ ಸಂತೆಯಲ್ಲೇ ಎದ್ದು ಬಿದ್ದು ಚೀರಾಡ್ತಾ, ಹಾರಾಡ್ತಾ, ತಮ್ಮ ದೇಹದ ಮೇಲೆ ತಮಗೇ ಅರಿವಿಲ್ಲದೆ ಚರಂಡಿಗೆ ಹತ್ತಿರವಾಗುತ್ತಿರುವುದು ಇನ್ನೊಂದೆಡೆಯಲ್ಲಿ ಯಾವಾಗಲೂ ಕಾಣಸಿಗುವ ಕುಡುಕರ ದೃಶ್ಯ.
ವೇಳೆ ಕಳೆದ ಹಾಗೆ ಮಹಿಳೆಯರ ದಂಡು ಮನೆಯಿಂದ ಹೊರಡುವುದು.‌ ಸಂತ್ಯಾಗ ಅವ್ವ ಏನಾರ್ರ್ ಕೊಡಿಸ್ತಾಳಂತ ಅವರ ಹಿಂದೆಯೇ ಬರುವ ಮಕ್ಕಳ ಮರಿ ಹಿಂಡು, ಆ ಹಿಂಡು ಕಂಡಾಗ ಬಾಲ್ಯದಲ್ಲಿ ನನ್ನವ್ವ ಮಂಡಕ್ಕಿ (ಕಡ್ಲೆ ಪುರಿ) ಕೊಳ್ಳುವಾಗ ಕೈಯೊಡ್ಡಿ ಡಾಣಿ (ಮಿಕ್ಷ್ಚರ್) ಎಂದಾಕ್ಷಣ ಅಲ್ಲಿಯ ಪ್ಯಾಕೇಟ್ ನಿಂದ ಮುಟುಕಿ ಡಾಣಿ ಕಿಸೆಗೆ ಬಂದು ಬೀಳುತ್ತಿದ್ದ ಸವಿ‌ನೆನಪು ಸ್ಮ್ರತಿ ಪಟಲದಲ್ಲಿದೆ. ಆ ನೆನಪು ಇನ್ನೂ ಹಸಿಯಾಗಿದೆ ಎಂದು‌ ಭಾಸವಾಯಿತು. ಇರಲಿ ಎಂದು‌ ಹಾಗೆ ಮುಂದೆ ನಡೆದೆ.
ಸಂತೆಯ ಮೂಲೆಯೊಂದರ ಬಳಿ ಕೋಳಿಗಳ ಕೂಡು ಹಾಕಿ ಕತ್ತಿ ಮಸೆವ ಕಟುಕನಂಗಡಿಯ ಮುಂದೆ ವಾರಕ್ಕೊಮ್ಮೆಯೊ ತಿಂಗಳಿಗೊಮ್ಮೆ ಚಿಕನ್‌ ಪಾರ್ಟಿ ಹಮ್ ಕೊಂಡು, ಪಾತ್ರೆ ಪಗಡೆಗಳನ್ನೆಲ್ಲಾ ಸಂತೆಗೂ ಮುಂಚೆಯೇ ಹೊಲಕ್ಕೆ ಸಾಗು ಹಾಕಿ ಗುಂಪಿನ ತಲಾ ದುಡ್ಡಲ್ಲಿ ಕಟುಕನಂಗಡಿಯ ಎದುರು ಗತ್ತಿನಲಿ ನಿಲ್ಲುವರು ಮತ್ತು ಕೋಳಿಯ ಕತ್ತಿಗೆ ಕತ್ತಿ ಹಾಕಿಸಿ ಕರೆ (ಕಪ್ಪು)ಹಾಳಿಯಲಿ ಕೊಂಡೊಯ್ಯುವರು.
ಹೊತ್ತು ಸರಿದು ಕತ್ತಲಾದ ಹಾಗೆ ಸಂತೆಯಲಿ ಜನರ ನೂಕು ನುಗ್ಗಲು, ನೂರಾರು ಮಂದಿ ಇವತ್ತು ಎಷ್ಟು ಉಳಿಸಬೇಕು ಎಷ್ಟು ಖರ್ಚು ಮಾಡ್ಬೇಕು, ಏನು ತೆಗಿಬೇಕು ಎಂಬ ಚಿಂತೆ ಗೊಂದಲದಲ್ಲಿ ಅತ್ತಿಂದಿತ್ತ ಒಡಾಡುತ್ತಿರುವುದನ್ನು ಸೂಕ್ಷ್ಮವಾಗಿ ನೋಡುತ್ತ, ನಮ್ಮನೆಯ ಸಂತೆಯತ್ತ ಗಮನಹರಿಸಿದೆ. ನನ್ನ ಸಂತೆ ಮುಗಿಯುವಷ್ಟರಲ್ಲಿ ಸಮಯ 6.30 ಆಗಿತ್ತು. ಇನ್ನೇನು ಮನೆಗೆ ಹೋಗಬೇಕು ಅನ್ನುವಾಗ ನಾನು ಸಂತೆಯ ಮಧ್ಯ ಭಾಗದಲ್ಲಿದ್ದರಿಂದ ಯಾರನ್ನಾದರೂ ಸುಮ್ನೆ ಇನ್ನೂ ಸೂಕ್ಷ್ಮ‌ವಾಗಿ ಗಮನಿಸಬೇಕೆಂಬ ಭಾವನೆ ನನ್ನೊಳಗೆ ಜೀವ ತಾಳಿತು. ಅದೇ ಸಮಯಕ್ಕೆ ಹೀಗೆ ಸಂತೆಯತ್ತ ಮಹಿಳೆಯೊಬ್ಬಳು ತನ್ನ ಮಗನನ್ನು ಎತ್ತಿಕೊಂಡು ಸಿಟ್ಟಿನ ಗೊಂದಲದಲ್ಲಿ ಬಂದಳು. ಅಂಗಡಿಯವನೊಬ್ಬನ ಬಳಿ ಹೋಗಿ ಮೆಣಸಿನಕಾಯಿ ಎಷ್ಟು ಎಂದಳು. ವ್ಯಾಪಾರಿ ನಿಗದಿತ ಬೆಲೆ ಹೇಳಿದ, ಟೊಮ್ಯಾಟೊ ಎಷ್ಟು ಎಂದಳು, ಮತ್ತೆ ಅದು ಕೆಜಿ 30 ರೂ ಎಂದ, ನಂತರ ಈರುಳ್ಳಿ ಹೇಗೆ ಎಂದಳು,.? ವ್ಯಾಪಾರಿ ಅದು ಕೆಜಿಗೆ 40ರೂ ಎಂದನು.. ಇವಳು ಮತ್ತೇ ಆಲೂಗಡ್ಡೆ ಎಷ್ಟು ಎಂದಳು.? ನಿನಗೆ ಏನು ಬೇಕಮ್ಮ ಎಂಬ ಹಾಸ್ಯಾಸ್ಪದ ಪ್ರಶ್ನೆ ವ್ಯಾಪಾರಕನಿಂದ ತಿರುಗಿ ಬಂತು. ತಕ್ಷಣಕ್ಕೆ ಅವಳು ಮರು ಉತ್ತರಿಸದೆ ಹೋದರೆ ಏನರ್ಥ. ಏನಿಲ್ಲಾ ಬಿಡಪ್ಪಾ ಎಂದು ಮಹಿಳೆ ಇನ್ನೊಬ್ಬನ ಅಂಗಡಿಗೆ ಬಂದು ಟೊಮ್ಯಾಟೊ ಎಷ್ಟು ಎಂದಳು. ಅವನು ಕೆಜಿ 20 ಎಂದ. ಆಗ ಕೆಳಗೆ ಕೂತು ಮಗನಿಗೆ ಪಕ್ಕದಲ್ಲಿದ್ದ ಎರಡು ಗಜ್ಜರಿ ತೆಗೆದುಕೊಟ್ಟಳು ಅದನ್ನು ಕಂಡು ವ್ಯಾಪಾರಕ ಗಿರಾಕಿಯಲ್ಲವೇ ಎಂದು ಸುಮ್ಮನಾದ, ಆ ಅಂಗಡಿಯ ಬೇರೆ ತರಕಾರಿಗಿಂತ ಇಲ್ಲಿಯ ಟೊಮೋಟೊ ಚೆನ್ನಾಗಿದ್ದರಿಂದ ಆರಿಸತೊಡಗಿದಳು. ಮಗು ಆಗ ಇನ್ನೊಂದು ಗಜ್ಜರಿ ತೆಗೆಯಿತು, ಆಗಲೂ ವ್ಯಾಪಾರಿ ಸುಮ್ಮನಿದ್ದ. ಟೊಮೇಟೊ ಹಣ್ಣು ತೂಕ ಮಾಡುವಾಗ ತಾಯಿ‌ ಮಗನಿಗಾಗಿ ಮತ್ತೆರಡು ಗಜ್ಜರಿ ತೆಗೆಯ ಬೇಕು ಅನ್ನುವಾಗ, ವ್ಯಾಪಾರಿ ಈ ಬಾರಿ, ಗಜ್ಜರಿ ಇಡ್ ಬೇ ಯವ್ವ ಇವು ಪಾವ್ ಕಿಲೋ 20 ರೂ ಅದವು ಎಂದು ಅವನ್ನು ಕಿತ್ತಿಟ್ಟ. ಏನಾಗಲ್ಲ ಬಿಡಪ್ಪ ಸಣ್ಣವ ಎಂದು ಮಗನ ಪರವಹಿಸಿದಳು. ಮುಂದೆ ನಡೆದು ಚೀಲದಿಂದ ಇನ್ನೊಂದು ಗಜ್ಜರಿ ಮಗನಿಗೆ ಕೊಟ್ಟಳು. ಈ ಗಜ್ಜರಿ ಚೀಲಕ್ಕೆ ಯಾವಾಗ‌ ಬಿತ್ತೊ ದೇವರೆ ಬಲ್ಲ. ಅದನ್ನು ಕಂಡಾಗ ನನ್ನೊಳಗಿನ ನಗುವಿನ ಕಟ್ಟೆಯೊಡೆದು ನಕ್ಕುಬಿಟ್ಟೆ.

ನಂತರ ಬೇರೊಂದು ಕಡೆ ಕಣ್ಣಾಹಿಸಿದೆ. ಗೂಡು ಅಂಗಡಿಯಂತ್ತಿದ್ದ ವ್ಯಾನ್ ಒಂದರ ಬಳಿ ಯುವಕರು, ಚೆಲುವೆಯರು, ಮಕ್ಕಳು ಗುಂಪಾಗಿ‌ ನಿಂತದ್ದನ್ನು ಕಂಡು ಕುಡುಕರಿದಾಯ್ತು ಮತ್ತೇನು ಈ ಗುಂಪಿನ ಸಮಾಚಾರ ಎನ್ನುತ ಅಂಗಡಿಯ ಬಳಿ ಬಂದೆ. ಧಿಡೀರ್ ನನ್ನ ನೋಟ ನೇರವಾಗಿ ಅಲ್ಲಿಯ ಬಾಣಲೆಯತ್ತ ಹಾಯಿತು, ಹಾಗೆ ಆಶ್ಚರ್ಯವೂ ಆಯ್ತು. ಹಲವಾರು ವರ್ಷಗಳಿಂದ ಇರದ ಗೋಬಿ ಅಂಗಡಿ ನಮ್ಮೂರ ಸಂತೆಗೂ ಬಂದಿರುವುದು‌ ವಿಸ್ಮಯವೇ. ಆದರೂ ತಿನ್ನುತ್ತಿರುವ ಎಲ್ಲರನ್ನು ಕಂಡು ನನ್ನಲ್ಲಿ ಆಸೆ ಹುಟ್ಟಿತು. ಕಿಸೆಯಿಂದ 15 ರೂ ಶೆಟ್ಟರ ಅಂಗಡಿಯಲ್ಲಿದ್ದವರಿಗೆ ಕೊಟ್ಟು ಗೋಬಿ‌ ತಿಂದು ಬಾಯ್ ಚಪಲ ತೀರಿಸಿಕೊಂಡೇ ಬಿಟ್ಟೆ. ಅಷ್ಟೇನ್ನುವಾಗ ಸಮಯವು ತುಂಬಾ ಆಗಿತ್ತು, ಸಂತೆಯು ಮುಗಿದಿತ್ತು. ಮನೆಯವರು ಸಂತೆಯ ನಿರೀಕ್ಷಣೆಯಲ್ಲಿ ಇರುತ್ತಾರೆಂಬುದು ನೆನಪಿಗೆ ಬಂತು. ನಿರೀಕ್ಷಕರ ಸಮಯಕ್ಕೆ ಬೆಲೆ ಕೊಟ್ಟು, ಹೀಗೆ ಎಲ್ಲರನ್ನು ಮೇಲ್ನೋಟಕ್ಕೆ ಗಮನಿಸುತ್ತಾ ಮನೆಯ ಹಾದಿ ಹಿಡಿದು ಹೊರಟಿರುವೆ‌ ಮನೆ‌ ತಲುಪುವ ಮುನ್ನವೇ ಈ ಎಲ್ಲಾ ಘಟನೆಗಳನ್ನು ‌ಬರೆಯಬೇಕೆಂದು‌ ನಿಶ್ಚಯಿಸಿ ಮನೆ ತಲುಪಿದೆ‌.

 

 

ಶಿವರಾಜ ಎಂ ಕೆ
ಗದಗ

 

 

 

Leave a Reply

Discover more from Nammura Suddi

Subscribe now to keep reading and get access to the full archive.

Continue reading