ಬೆಳ್ತಂಗಡಿ : ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತಿಯ ಗ್ಯಾರಂಟಿ ಅನುಷ್ಟಾನ ಸಮಿತಿ ಕಛೇರಿಯಲ್ಲಿ ನಡೆಯಿತು.
ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.
ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು ಚರ್ಚೆ ನಡೆಯಿತು. ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2026ರ ಜನವರಿ ತಿಂಗಳಲ್ಲಿ 27156 ಕುಟುಂಬಗಳಿಗೆ 1,35,94,598/- ರೂ, ಬೆಳ್ತಂಗಡಿ ಉಪವಿಭಾಗದಲ್ಲಿ 2026ರ ಜನವರಿ ತಿಂಗಳಲ್ಲಿ 44878 ಕುಟುಂಬಗಳಿಗೆ 2,63,46,370/-ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ 112,79,21,943/- ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಪ್ರಕೃತ 58884 ಫಲಾನುಭವಿಗಳಿದ್ದು, ಆಗಸ್ಟ್-2023 ರಿಂದ ಅಕ್ಟೋಬರ್-2025ರವರೆಗೆ 2,64,95,90,000/-ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಅನ್ನ ಭಾಗ್ಯ ಯೋಜನೆಯಡಿ ಸರ್ಕಾರದ ಆದೇಶದಂತೆ ಸಮೀಕ್ಷೆ ನಡೆಸಲಾಗಿದ್ದು, 764 ಪಡಿತರ ಚೀಟಿಗಳನ್ನು ಎ.ಪಿ.ಎಲ್ ಆಗಿ ಪರಿವರ್ತಿಸಲಾಗಿರುತ್ತದೆ. 1554 ಪಡಿತರ ಚೀಟಿಗಳನ್ನು ಬಿ.ಪಿ.ಎಲ್ ಆಗಿ ಮುಂದುವರಿಸಲಾಗಿದೆ. ಜುಲೈ-2023 ರಿಂದ ಜನವರಿ-2025ರವರೆಗೆ ಡಿಬಿಟಿ ಮುಖಾಂತರ 45613 ಪಡಿತರ ಚೀಟಿದಾರರಿಗೆ ಪ್ರತೀ ಕೆ.ಜಿ.ಗೆ ರೂಪಾಯಿ 34.00 ರಂತೆ 55,49,55,540.00ರೂಗಳ ಅನುದಾನವು ತಾಲೂಕಿನ ಪಡಿತರ ಚೀಟಿದಾರರಿಗೆ ದೊರೆತಿರುವುದಾಗಿ ಅಧಿಕಾರಿಗಳು ಸಭೆಗೆ ವಿವರ ನೀಡಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7392 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 941 ಅಭ್ಯರ್ಥಿಗಳಿಗೆ 2025ರ ನವೆಂಬರ್ ತಿಂಗಳಲ್ಲಿ 13,89,000ರೂ.ಗಳನ್ನು ಡಿ.ಬಿ.ಟಿ ಮೂಲಕ ಸಹಾಯಧನವನ್ನು ವಿತರಿಸಲಾಗಿದ್ದು, ಆಗಸ್ಟ್-2023 ರಿಂದ 2025ರ ನವೆಂಬರ್ ತಿಂಗಳವರೆಗೆ 2,70,22,500.00 ರೂ.ಗಳನ್ನು ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ 2026ರ ಜನವರಿ ತಿಂಗಳಲ್ಲಿ 759784 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-2023 ರಿಂದ ಈ ವರೆಗೆ 94,64,55,937/-ರೂ. ಬಿಡುಗಡೆಯಾಗಿರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸರ್ಕಾರವು 1200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿರುವ ಕಟ್ಟಡಕ್ಕೆ ಸಿಸಿ ಯಿಂದ ವಿನಾಯಿತಿ ನೀಡುವಂತೆ ಆದೇಶಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು 1200 ಚದರಡಿ ವಿಸ್ತೀರ್ಣದ ಕಟ್ಟಡವೆಂದು ತಪ್ಪಾಗಿ ಅರ್ಥೈಸಿಕೊಂಡು ದೃಢಪತ್ರವನ್ನು ನೀಡಲು ನಿರಾಕರಿಸಿರುವುದನ್ನು ಸದಸ್ಯರು ಚರ್ಚಿಸಿ ಈ ಬಗ್ಗೆ ಸೂಕ್ತ ಮಾಹಿತಿಯನ್ನು ತಾಲೂಕು ಪಂಚಾಯತಿನಿಂದ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಧ್ಯಕ್ಷರು ತಾಲೂಕಿನಲ್ಲಿ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಂಡಿದ್ದು ತಾಲೂಕಿನಲ್ಲಿ ಆಗಬೇಕಾದ ಮೆಸ್ಕಾಂಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಅಧ್ಯಕ್ಷರ ಗಮನಕ್ಕೆ ತರುವಂತೆ ಅಧ್ಯಕ್ಷರು ತಿಳಿಸಿದರು.
ಯುವ ನಿಧಿ ಯೋಜನೆಯ ಬಗ್ಗೆ ತಾಲೂಕಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ತಾಲೂಕಿನಲ್ಲಿ ಹಲವಾರು ಮಂದಿಗೆ ಜಿ.ಎಸ್.ಟಿ ಪಾವತಿದಾರರೆಂದು ದಾಖಲಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸವಲತ್ತನ್ನುಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಅಧ್ಯಕ್ಷರು ಸೂಚಿಸಿದರು.
ಕೆಲವು ಮಾರ್ಗಗಳಲ್ಲಿ ತಡೆರಹಿತ ಬಸ್ಸುಗಳಲ್ಲಿ ನಿಲುಗಡೆ ಸೌಲಭ್ಯವನ್ನು ಒದಗಿಸುತ್ತಿಲ್ಲವೆಂದು ತಿಳಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೆ ವಹಿಸುವಂತೆ ಅಧ್ಯಕ್ಷರು ಸೂಚಿಸಿದರು.
ಗೃಹಲಕ್ಷ್ಮೀ ಯೋಜನೆಯ ಕೆಲವು ಫಲಾನುಭವಿಗಳು ಮೃತರಾಗಿದ್ದು ಅಂತಹ ಫಲಾನುಭವಿಗಳ ಖಾತೆಗಳಿಗೆ ಈಗಲೂ ಮಾಹಿಕ ಮೊತ್ತವು ಜಮೆಯಾಗುತ್ತಿರುವ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗಿ ಮೃತಪಟ್ಟ ಫಲಾನುಭವಿಗಳ ವಾರೀಸುದಾರರು ಸ್ವಯಂ ಪ್ರೇರಿತವಾಗಿ ಮಾಹಿತಿಯನ್ನು ನೀಡಿ ಯೋಜನೆಯ ದುರುಪಯೋಗವನ್ನು ತಡೆಯಲು ಸಹಕರಿಸುವಂತೆ ಅಧ್ಯಕ್ಷರು ವಿನಂತಿಸಿ ಈ ಬಗ್ಗೆ ಅಗತ್ಯ ಕ್ರಮ ಇಲಾಖಾಧಿಕಾರಿಗಳಿಗೆ ವಹಿಸುವಂತೆ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ಶ್ರೀಮತಿ ಸೌಮ್ಯ ಲಾಯಿಲ, ಶ್ರೀಮತಿ ಮೆರಿಟಾ ಪಿಂಟೋ, ವಾಸುದೇವ ರಾವ್, ವಿಜಯಗೌಡ ಬೆಳಾಲು, ಶರೀಫ್ ಸಬರಬೈಲ್, ಕೆ.ನೇಮಿರಾಜ್ ಕಿಲ್ಲೂರು, ಶ್ರಿಪತಿ ಉಪಾಧ್ಯಾಯ, ಶ್ರೀಮತಿ ವಂದನಾ, ಸತೀಶ್ ಹೆಗ್ಡೆ, ಅಬ್ದುಲ್ ಸಲಾಂ, ಕೇಶವ ನಾಯ್ಕ್ ಹಾಗೂ ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸ್ವಿಕ್ವೇರಾ ಇವರು ಉಪಸ್ಥಿತರಿದ್ದರು.