ಬೆಳ್ತಂಗಡಿ : ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಐದೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿ ಒಟ್ಟು ನಾಲ್ಕು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೋರ್ವ ಬೆಳ್ತಂಗಡಿಯ ಸಮಾಜಸೇವಾಕನ ಹೆಸರಲ್ಲಿ ಡ್ರಗ್ಸ್ ಪೆಡ್ಲಿಂಗ್ ದಂಧೆ ನಡೆಸುತ್ತಿದ್ದ ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ (42) ಎಂಬಾತ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಲೆ ಬಿಸಿದ್ದಾರೆ.

ಪ್ರಕರಣದ ವಿವರ : ಮಂಗಳೂರು ನಗರ ಸಿಸಿಬಿ ಪೊಲೀಸರು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಗೆ ಜೂ.25 ರಂದು ನಡೆಸಿದ ದಾಳಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ 1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದೆಹಲಿಯಿಂದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಸುಳಿವು ಪಡೆದರು.
ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಅಂದಾಜು ಐದೂವರೆ ಕೋಟಿ ರೂ. ಮೌಲ್ಯದ ಒಟ್ಟು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.ಪ್ರಮುಖ ಆರೋಪಿ ಮೊಹಮ್ಮದ್ ಅಲ್ತಾಫ್ ವಿರುದ್ಧ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಮತ್ತು 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಮೂವರ ಬಂಧನ: ಈಗಾಗಲೇ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಲಾಯಿಲ ಗ್ರಾಮದ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಫಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು (26) ಎಂಬವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಅಣ್ಣಪ್ಪ ಸ್ವಾಮಿ ಎಂಬವನನ್ನು ಮೊದಲೇ ಬಂಧಿಸಿ ಜೈಲಿಗಟ್ಟಲಾಗಿದ್ದು, ಬೆಳ್ತಂಗಡಿಯ ಜಲೀಲ್ @ ಬಾಬಾ (42) ಎಂಬಾತನೂ ಇದೀಗ ನಾಲ್ಕನೇ ಆರೋಪಿ ಎಂದು ದಾಖಲಾಗಿದೆ.

ಕೋರ್ಟ್ ಗೆ ವರದಿ ಸಲ್ಲಿಕೆ: ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮಂಗಳೂರಿನ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯಕ್ಕೆ ಜು.16 ರಂದು ಸಲ್ಲಿಸಿದ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲು ಹಾಗೂ ಮುಂದಿನ ತನಿಖೆಯಲ್ಲಿ ನಾಲ್ಕನೇ ಆರೋಪಿ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ ಎಂಬವನ ಹೆಸರನ್ನು ಉಲ್ಲೇಖಿಸಿ ಬಂಧನ ಬಾಕಿ ಇದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.

ಆಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ ಪರಾರಿ: ಈ ಮಾದಕ ವಸ್ತು MDMA ಯನ್ನು ಈ ಮೊದಲು ಬಂಧಿತರಾದ ಮೂವರು ಆರೋಪಿಗಳಿಂದ ಬೆಳ್ತಂಗಡಿಯ ಜಲೀಲ್ @ ಬಾಬಾ (42) ಎಂಬಾತ ಪಡೆದುಕೊಂಡು ತನ್ನ ಅಂಬುಲೆನ್ಸ್ ವಾಹನದಲ್ಲಿ ಜಿಲ್ಲೆಯ ಯುವಕರಿಗೆ, ಡಾಕ್ಟರ್, ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಬಂಧನವಾದ ಬಳಿಕ ಬೆಳ್ತಂಗಡಿಯ ಅಂಬುಲೆನ್ಸ್ ಚಾಲಕ ಜಲೀಲ್ @ ಬಾಬಾ ಕಳೆದ 8 ದಿನಗಳಿಂದ ತನ್ನ ಎರಡು ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣ ಗಂಭೀರವಾಗಿರುವ ಕಾರಣ ಜಲೀಲ್ @ ಬಾಬಾ ನಿಗೆ ತಲೆಮರೆಸಿಕೊಳ್ಳಲು ಸಹಾಯ ಅಥವಾ ಅಶ್ರಯ ನೀಡಿದವರಿಗೂ ಸಿಸಿಬಿ ಪೊಲೀಸರಿಂದ ಕಾನೂನಿನ ಕಂಟಕ ಎದುರಾಗಲಿದೆ.

 

Leave a Reply

Discover more from Nammura Suddi

Subscribe now to keep reading and get access to the full archive.

Continue reading